
ಮೈಸೂರು : ಸಚಿವ ಬಿ.ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸುತ್ತಿರುವ ಬಿಜೆಪಿ ನಡೆಯನ್ನು ಖಂಡಿಸಿ ಮಾಜಿ ನಗರಪಾಲಿಕೆ ಸದಸ್ಯ ಲೋಕೇಶ್ ಪಿಯಾ ನೇತೃತ್ವದಲ್ಲಿ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಜಿಲ್ಲಾ ಪಂಚಾಯತ್ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಸಚಿವ ಬಿ.ನಾಗೇಂದ್ರ ಅವರ ಭಾವಚಿತ್ರವನ್ನು ಹಿಡಿದುಕೊಂಡು ನಾನಾ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಮೈಸೂರು ನಗರಪಾಲಿಕೆಯ ಮಾಜಿ ಸದಸ್ಯ ಲೋಕೇಶ್ ಪಿಯಾ, ಸಚಿವ ಬಿ.ನಾಗೇಂದ್ರ ಅವರ ಪುನರ್‌ಸೇರ್ಪಡೆ ವಿರೋಧಿಸುತ್ತಿರುವ ಬಿಜೆಪಿ ನಾಯಕರು, ಮೊದಲು ತಮ್ಮ ಆಡಳಿತಾವಧಿಯ ಭ್ರಷ್ಟಾಚಾರದ ಇತಿಹಾಸವನ್ನು ಒಮ್ಮೆ ಹಿಂತಿರುಗಿ ನೋಡಿಕೊಳ್ಳಲಿ. ವಾಲ್ಮೀಕಿ ಅಭಿವೃದ್ಧಿ ನಿಗಮದ ಪ್ರಕರಣದಲ್ಲಿ ತನಿಖೆ, ನ್ಯಾಯಾಂಗ ಪರಿಶೀಲನೆ ಚಾಲ್ತಿಯಲ್ಲಿದೆ. ತನಿಖೆ ಅಥವಾ ಆರೋಪಪಟ್ಟಿ ಸಲ್ಲಿಕೆಯಾದ ತಕ್ಷಣವೇ ಒಬ್ಬರನ್ನು ರಾಜಕೀಯವಾಗಿ ಅಪರಾಧಿ ಎಂದು ಬಿಂಬಿಸಲು ಹೊರಟಿರುವ ಬಿಜೆಪಿಗೆ ಅಂತಹ ಯಾವುದೇ ನೈತಿಕ ಅಧಿಕಾರವಿಲ್ಲ ಎಂದು ಕಿಡಿ ಕಾರಿದರು.
ಬಿಜೆಪಿ ನಾಯಕರು ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಮೊದಲು ತಮ್ಮದೇ ಸರ್ಕಾರದ ಅವಧಿಯಲ್ಲಿ ನಡೆದ ಪ್ರಮುಖ ಹಗರಣಗಳಿಗೆ ಸಾರ್ವಜನಿಕವಾಗಿ ಉತ್ತರ ನೀಡಬೇಕು. ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ನಡೆಸಿದ ಶೇ.40 ಕಮಿಷನ್ ಆರೋಪದ ವಿಚಾರಣೆಗಳು ಇನ್ನೂ ಪ್ರತ್ಯೇಕವಾಗಿ ನಡೆಯುತ್ತಿವೆ. ಒಂದು ಸಣ್ಣ ಪ್ರಕರಣದ ಫಲಿತಾಂಶ ಇಟ್ಟುಕೊಂಡು ಇಡೀ ಆರೋಪವನ್ನು ಸುಳ್ಳು ಎನ್ನಲಾಗುವುದಿಲ್ಲ. ಪಿಎಸ್‌ಐ ನೇಮಕಾತಿ ಅಕ್ರಮ, ಬಿಟ್‌ಕಾಯಿನ್ ಪ್ರಕರಣ ಹಾಗೂ ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ನಡೆದ ಖರೀದಿ ಅಕ್ರಮಗಳ ಕುರಿತು ಬಿಜೆಪಿ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.
ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ಕಾನೂನುಬದ್ಧ ತನಿಖೆಯಾಗಲಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆದರೆ, ಅದರ ಜೊತೆ ಜತೆಗೆ ಬಿಜೆಪಿ ಅವಧಿಯಲ್ಲಿ ನಡೆದ ಶೇ.40 ಕಮಿಷನ್, ಪಿಎಸ್‌ಐ ಮತ್ತು ಕೋವಿಡ್ ಅಕ್ರಮಗಳನ್ನೂ ಸಹ ನಿಷ್ಪಕ್ಷಪಾತವಾಗಿ ತನಿಖೆಗೆ ಒಳಪಡಿಸಬೇಕು. ಭ್ರಷ್ಟಾಚಾರದ ವಿರುದ್ಧದ ಹೋರಾಟ ಪಕ್ಷಾತೀತವಾಗಿರಬೇಕೇ ಹೊರತು, ರಾಜಕೀಯ ಆಯುಧವಾಗಬಾರದು. ಅಂತಿಮ ತೀರ್ಪು ಬರುವವರೆಗೆ ಕಾನೂನು ತನ್ನ ಕೆಲಸ ಮಾಡುತ್ತದೆ. ನಮ್ಮ ಆಡಳಿತದಲ್ಲಿ ಬಂದ ಆರೋಪಗಳ ಬಗ್ಗೆ ನಾವು ಏನು ಮಾಡಿದ್ದೇವೆ ಎಂದು ಬಿಜೆಪಿ ನಾಯಕರು ತಮ್ಮನ್ನೇ ಪ್ರಶ್ನಿಸಿಕೊಳ್ಳಲಿ. ಪ್ರಜಾಪ್ರಭುತ್ವದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ನಿರಪರಾಧಿಗಳಿಗೆ ರಕ್ಷಣೆ ಸಿಗುವುದೇ ಕಾನೂನಿನ ನಿಜವಾದ ಆಡಳಿತ ಎಂದರು.
ಪ್ರತಿಭಟನೆಯಲ್ಲಿ ಮುಖಂಡರುಗಳಾದ ಚಂದ್ರಶೇಖರ್, ವಿಜಯ್, ರವಿ, ರಂಗಸ್ವಾಮಿ, ನಾರಾಯಣ ಸೇರಿದಂತೆ ಹಲವರು ಭಾಗವಹಿಸಿದ್ದರು.