
ಪಿರಿಯಾಪಟ್ಟಣ:12ನೇಯ ಶತಮಾನದ ವಚನಕಾರ ಹಾಗೂ ಸಾಮಾಜಿಕ ಕ್ರಾಂತಿ ಹರಿಕಾರ ಹಡಪದ ಅಪ್ಪಣ್ಣ ಸಮಾಜಕ್ಕೆ ನೀಡಿದ ಕೊಡುಗೆ ಅಪಾರ. ಅವರ ವಿಚಾರಧಾರೆಗಳು ಸಮಾಜಕ್ಕೆ ದಾರಿದೀಪವಾಗಿದೆ ಎಂದು ಶಿಕ್ಷಕ ಎನ್.ಆರ್. ಕಾಂತರಾಜ್ ತಿಳಿಸಿದರು.
ಪಟ್ಟಣದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಹಡಪದ ಅಪ್ಪಣ್ಣನವರ ಜೀವನ ಚರಿತ್ರೆ ತಿಳಿದುಕೊಳ್ಳುವ ಜತೆಗೆ ಅವರ ತತ್ವ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಇವರು ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ಗ್ರಾಮದ ಚನ್ನವೀರಪ್ಪ ಮತ್ತು ದೇವಕ್ಕಮ್ಮ ನವರ ಪುತ್ರರಾಗಿ ಜನಿಸಿದ ಇವರು, ಕ್ಷೌರಿಕ ಕಾಯಕದ ಮೂಲಕ ನಿಷ್ಠೆ, ಸೇವಾ ಮನೋಭಾವನೆಯುಳ್ಳ ವಿಶೇಷ ವ್ಯಕ್ತಿಯಾಗಿದ್ದರು.
ಇವರು ಕ್ರಾಂತಿಕಾರಿ ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 12ನೇ ಶತಮಾನದ ವಚನ ಚಳವಳಿಯ ಪ್ರಮುಖ ಶರಣರಾಗಿ ಜಾತಿ, ಅಸಮಾನತೆ ವಿರೋಧಿಸಿ ಸಮಾಜ ಸುಧಾರಣೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಹಡಪದ ಅಪ್ಪಣ್ಣ 250 ವಚನ ರಚಿಸಿದರೆ ಅವರ ಪತ್ನಿ ಶಿವಶರಣೆ ಲಿಂಗಮ್ಮ ನವರು 114 ವಚನ ರಚಿಸಿ ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದರು.
ತಹಶೀಲ್ದಾರ್ ನಿಸರ್ಗ ಪ್ರಿಯಾ ಮಾತನಾಡಿ ಹಡಪದ ಅಪ್ಪಣ್ಣ ಅವರು ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿ ವ್ಯವಸ್ಥೆ, ಕಂದಾಚಾರ, ಮೂಢನಂಬಿಕೆ ವಿರುದ್ಧ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣೀಯ. ಆದ್ದರಿಂದ ಸಮಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ ಶರಣರು, ಸಂತರು, ದಾರ್ಶನಿಕರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ ಕಾಯಕ ತತ್ವದಡಿ ಬದುಕು ರೂಪಿಸಿಕೊಳ್ಳುವುದೇ ಶರಣ ಆಶಯವಾಗಿತ್ತು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಸವಿತಾ ಸಮಾಜದ ಅಧ್ಯಕ್ಷ ಆಯಿತನಹಳ್ಳಿ ಪ್ರಸನ್ನ, ಮಾಜಿ ಅಧ್ಯಕ್ಷ ರಾಮಚಂದ್ರ, ನಿರ್ದೇಶಕ ಪಿ.ಎನ್.ಲೋಕೇಶ್, ಸವಿತಾ ಸಮಾಜದ ಮುಖಂಡರಾದ ನಾಗಣ್ಣ, ಸುರೇಶ್, ಕಿಟ್ಟಿ, ಕೆ.ಪಿ.ರಾಘು, ಬಿ.ವಿ.ಮಂಜುನಾಥ್, ದೊಡ್ಡ ಬ್ಯಾಲಾಳು ರಮೇಶ್, ಪಂಚವಳ್ಳಿ ಮಲ್ಲೇಶ್, ಶಾರದಮ್ಮ, ತಿಮ್ಮಪ್ಪ, ಅಭಿ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಮತ್ತಿತರು ಉಪಸ್ಥಿತರಿದ್ದರು.