
ಮೈಸೂರು: ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ೩೫೫ನೇ ಆರಾಧನಾ ಮಹೋತ್ಸವದ ಅಂಗವಾಗಿ ಅರಿವು ಸಂಸ್ಥೆಯ ವತಿಯಿಂದ ಕೃಷ್ಣಮೂರ್ತಿಪುರಂನಲ್ಲಿರುವ ರಾಯರ ಮಠದಲ್ಲಿ ಭಕ್ತಾದಿಗಳಿಗೆ ಶ್ರೀರಾಮ ಹಾಗೂ ಶ್ರೀಕೃಷ್ಣ ತುಳಸಿ ಗಿಡಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಡಾ. ಶ್ರೀನಿವಾಸ್ ಆಚಾರ್ಯ, ತುಳಸಿ ಗಿಡದ ಧಾರ್ಮಿಕ, ಪೌರಾಣಿಕ ಹಾಗೂ ಔಷಧೀಯ ಮಹತ್ವವನ್ನು ವಿವರಿಸಿದರು. ಶ್ರೀ ಗುರು ರಾಘವೇಂದ್ರ ಸ್ವಾಮಿಗಳಿಗೆ ತುಳಸಿ ಅತ್ಯಂತ ಪ್ರಿಯವಾಗಿದ್ದು, ಅದು ಭಕ್ತಿಯ ಸಂಕೇತವಾಗಿದೆ ಎಂದು ಹೇಳಿದರು.
ತುಳಸಿ ಗಿಡವು ಅನೇಕ ಆಯುರ್ವೇದಿಕ ಔಷಧೀಯ ಗುಣಗಳನ್ನು ಹೊಂದಿದ್ದು, ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮಧುಮೇಹ ನಿಯಂತ್ರಣ, ಕೊಲೆಸ್ಟಾçಲ್ ಕಡಿತ, ಕಿಡ್ನಿ ಹಾಗೂ ಲಿವರ್ ಆರೋಗ್ಯ ರಕ್ಷಣೆ ಸೇರಿದಂತೆ ಹಲವು ಪ್ರಯೋಜನಗಳನ್ನು ಹೊಂದಿದೆ ಎಂದು ತಿಳಿಸಿದರು. ಭಗವಂತನಿಗೆ ಎಷ್ಟೇ ಚಿನ್ನ, ಬೆಳ್ಳಿ, ಹೂವು, ಹಣ್ಣು ಹಾಗೂ ನೈವೇದ್ಯ ಅರ್ಪಿಸಿದರೂ ತುಳಸಿ ದಳವಿಲ್ಲದೆ ಪೂಜೆ ಸಂಪೂರ್ಣವಾಗುವುದಿಲ್ಲ ಎಂಬ ನಂಬಿಕೆ ಇದೆ ಎಂದು ಹೇಳಿದರು.
ಶ್ರೀ ಗುರು ರಾಘವೇಂದ್ರ ಸ್ವಾಮಿಗಳು ತುಳಸಿಗೆ ವಿಶೇಷ ಮಹತ್ವ ನೀಡುತ್ತಿದ್ದು, ಭಕ್ತರು ತಮ್ಮ ಮನೆಗಳಲ್ಲಿ ತುಳಸಿ ಬೆಳೆಸಿ ಅದರ ಆರಾಧನೆ ಮಾಡುವ ಮೂಲಕ ಆಧ್ಯಾತ್ಮಿಕ ಹಾಗೂ ಆರೋಗ್ಯಕರ ಜೀವನವನ್ನು ನಡೆಸಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿ. ರಾಘವೇಂದ್ರ, ಅರಿವು ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ್ ಕಶ್ಯಪ್, ಸುಚೇಂದ್ರ ತೀರ್ಥ, ಮುರಳಿ, ಚಕ್ರಪಾಣಿ, ಸತೀಶ್, ಯಶಸ್, ವಿನಯ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.