Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಕಲಿಯುಗದಲ್ಲಿ ಮಹಾಭಾರತದ ಜ್ಞಾನ ಅಗತ್ಯ ; ವಿಧಾನಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ


ಮೈಸೂರು: ಧರ್ಮ ಮತ್ತು ಅಧರ್ಮದ ನಡುವಿನ ಸಂಘರ್ಷವನ್ನು ಅರ್ಥೈಸಿಕೊಳ್ಳಲು ಕಲಿಯುಗದಲ್ಲಿರುವ ಪ್ರತಿಯೊಬ್ಬರೂ ಮಹಾಭಾರತವನ್ನು ತಿಳಿಯುವುದು ಅಗತ್ಯವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ಹೇಳಿದರು.
ಶುಕ್ರವಾರ ನಗರದ ಕಲಾಮಂದಿರದ ಕಿರುರಂಗಮAದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಶ್ರೀ ಕೃಷ್ಣ ಜಯಂತ್ಯೋತ್ಸವ ಸಮಿತಿ ವತಿಯಿಂದ ಶ್ರೀ ಕೃಷ್ಣ ಜಯಂತಿಯ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು,
ಭಗವಂತನ ಸ್ವರೂಪಿಯಾಗಿ ಅವತರಿಸಿದ ಶ್ರೀಕೃಷ್ಣನು ತಾಯಿಯ ಗರ್ಭದಲ್ಲಿದ್ದಾಗಲೇ ಜಗತ್ತಿಗೆ ತನ್ನ ಸಂದೇಶ ನೀಡಲು ಪ್ರಾರಂಭಿಸಿದನು. ಬಾಲ್ಯದಲ್ಲಿಯೇ ತನ್ನ ಬಾಯಿ ತೆರೆದು ಇಡೀ ಜಗತ್ತನ್ನೇ ತೋರಿಸುವ ಮೂಲಕ ತನ್ನ ದಿವ್ಯತೆಯನ್ನು ಪ್ರಕಟಿಸಿದನು. ಜೀವನದಲ್ಲಿ ನಮಗೆ ಅಧಿಕಾರ, ಐಶ್ವರ್ಯ ಬಂದಾಗ ಉನ್ಮತ್ತರಾಗಿ ಮೆರೆಯಬಾರದು ಮತ್ತು ತೀವ್ರ ದುಃಖ-ಕಷ್ಟಗಳು ಬಂದಾಗ ಧೃತಿಗೆಡಬಾರದು ಎಂದು ಹೇಳಿದರು.
ಭೀಮನು ಕೃಷ್ಣನಲ್ಲಿ ಅತ್ಯಂತ ಸುಖಿ ಹಾಗೂ ಅತ್ಯಂತ ದುಃಖಿಯಲ್ಲಿರುವ ಇಬ್ಬರಿಗೂ ಅನ್ವಯವಾಗುವ ಒಂದು ಸಾಲಿನ ಸಂದೇಶವನ್ನು ಕೇಳಿದಾಗ, ಕೃಷ್ಣನು ಈ ಸಮಯವೂ ಸರಿದು ಹೋಗಲಿದೆ ಎಂದು ಬರೆದು ನೀಡಿದನು. ಸಂಪತ್ತು, ಅಧಿಕಾರ ಶಾಶ್ವತವಲ್ಲ ಎಂಬ ಎಚ್ಚರಿಕೆಯನ್ನು ನೀಡುವ ಜೊತೆಗೆ, ಎಂತಹ ಕಷ್ಟದ ಪರಿಸ್ಥಿತಿಯೂ ಕೊನೆಗೊಳ್ಳುತ್ತದೆ ಎಂಬ ಭರವಸೆಯನ್ನು ಕೃಷ್ಣನ ಈ ಸಂದೇಶ ನಮಗೆ ನೀಡುತ್ತದೆ ಎಂದು ಅವರು ತಿಳಿಸಿದರು.
ಶ್ರೀ ಕೃಷ್ಣನು ಜಗತ್ತಿಗೆ ನೀಡಿದ ಧರ್ಮಸಾರ ಹಾಗೂ ಪ್ರತಿಯೊಂದು ಹಂತದ ಸಂದೇಶಗಳು ಅಪ್ರತಿಮವಾದವು. ಇವುಗಳನ್ನು ಶಿಕ್ಷಣದ ಭಾಗವಾಗಿಸಿ ಬೆಳೆಸಿದರೆ ಮಕ್ಕಳು ಸನ್ಮಾರ್ಗದಲ್ಲಿ ಸಾಗುತ್ತಾರೆ. ಯಾದವ ಕುಲವು ಭಾರತೀಯ ಸಂಸ್ಕೃತಿಗೆ ತನ್ನದೇ ಆದ ದೊಡ್ಡ ಕೊಡುಗೆ ನೀಡಿದೆ. ಮೈಸೂರು ಸಂಸ್ಥಾನವನ್ನು ಆಳಿದ ರಾಜಮನೆತನವು ಯದುವಂಶಕ್ಕೆ ಸೇರಿದುದಾಗಿದ್ದು, ದ್ವಾರಕೆಯಿಂದ ಬಂದ ಈ ಸಂಸ್ಥಾನಿಕರು ನಾಡಿಗೆ ನೀರು, ಆರೋಗ್ಯ, ಶಿಕ್ಷಣ, ದೇವಾಲಯ ಹಾಗೂ ಆಧ್ಯಾತ್ಮಿಕ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಯಾದವ ಸಮುದಾಯವು ಸಂಖ್ಯೆಯಲ್ಲಿ ಕಡಿಮೆಯಿದ್ದರೂ ಧರ್ಮ ಮತ್ತು ಸಾಮಾಜಿಕ ವಿಚಾರಗಳಲ್ಲಿ ಸದಾ ಮುಂಚೂಣಿಯಲ್ಲಿದ್ದು, ಸಮಾಜಕ್ಕೆ ದಾರಿದೀಪವಾಗಿ ಕೆಲಸ ಮಾಡುತ್ತಿದೆ.ಮಹಾಭಾರತ, ಭಾಗವಧ್ಗೀತೆ ಬಗ್ಗೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಮಾತನಾಡಿ, ಭಗವದ್ಗೀತೆಯ ಅತ್ಯಂತ ಪ್ರಸಿದ್ಧ ಶ್ಲೋಕವಾದ, ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ. ಮಾನವಕುಲದಲ್ಲಿ ಅಧರ್ಮವು ಹೆಚ್ಚಾಗಿ, ಧರ್ಮದ ಕ್ಷೀಣತೆ ಉಂಟಾದಾಗಲೆಲ್ಲ ಸಜ್ಜನರ ರಕ್ಷಣೆ ಹಾಗೂ ಧರ್ಮದ ಮರುಸಂಸ್ಥಾಪನೆಗಾಗಿ ಭಗವಂತನು ಯುಗ ಯುಗಗಳಲ್ಲೂ ವಿವಿಧ ರೂಪಗಳಲ್ಲಿ ಅವತರಿಸುತ್ತಾನೆ ಶ್ರೀಕೃಷ್ಣ ವಾಣಿಯ ಅರ್ಥ ಎಂದು ಹೇಳಿದರು.
ಭಗವದ್ಗೀತೆಯ ನಿಜವಾದ ಅರ್ಥ ಮತ್ತು ಸಾರವನ್ನು ಗ್ರಹಿಸಿ, ಜೀವನದಲ್ಲಿ ಅರ್ಥೈಸಿಕೊಂಡಾಗ ಮಾತ್ರ ಮಾನವ ಜನ್ಮ ಸಾರ್ಥಕತೆಯನ್ನು ಪಡೆಯುತ್ತದೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಪ್ರತಿದಿನ ಕನಿಷ್ಠ ಒಂದು ಸಣ್ಣ ಭಗವದ್ಗೀತೆಯ ಶ್ಲೋಕ ಮತ್ತು ಅದರ ಅರ್ಥವನ್ನು ಕನ್ನಡದಲ್ಲಿ ಸರಳವಾಗಿ ಹೇಳಿಕೊಡಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸುದರ್ಶನ್, ಬರಹಗಾರ ಡಾ. ನಾಗೇಶ್ ಯಾದವ್, ಯಾದವ ಸಂಘದ ಉಪಾಧ್ಯಕ್ಷ ಎಮ್. ವೆಂಕಟಾಚಲ, ಕಾರ್ಯದರ್ಶಿ ಜವರೇಗೌಡರು, ರಂಗಸ್ವಾಮಿ, ಪುಷ್ಪವಲ್ಲಿ ಮತ್ತಿತರರು ಉಪಸ್ಥಿತರಿದ್ದರು.