Skip to main content

3Kaala News

ಸುಭಾಷಿತ 

ನಾವು ಏನು ಹೇಳುತ್ತೇವೆ ಅನ್ನೋದಕ್ಕಿಂತ, ಹೇಗೆ ಹೇಳುತ್ತೇವೆ ಅನ್ನುವುದೇ ಬದುಕಿನ ಗುಟ್ಟು.
ಮಾತಿನ ಶೈಲಿ ಹೃದಯ ಗೆಲ್ಲಬಹುದು, ಸಮಸ್ಯೆ ಪರಿಹರಿಸಬಹುದು, ಅಥವಾ ಸಂಬಂಧ ಉಳಿಸಬಹುದು.
ಮಾತು ಮನುಷ್ಯನ ಶಕ್ತಿ — ಅದನ್ನು ಜಾಣ್ಮೆಯಿಂದ ಬಳಕೆ ಮಾಡಿದರೆ ಬದುಕು ಸುಲಭವಾಗುತ್ತದೆ

 

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ದಸರಾ ಆಹಾರ ಮೇಳವನ್ನು ನಗರದ ಹೊರಭಾಗದಲ್ಲಿ ಆಯೋಜಿಸಿ, ಹೋಟೆಲ್‌ಗಳಿಗೆ ರಾತ್ರಿ 12 ರವರೆಗೆ ಅವಕಾಶ ನೀಡಲು ಒತ್ತಾಯ.


ಮೈಸೂರು; ದಸರಾ ಆಹಾರ ಮೇಳವನ್ನು ನಗರದ ಹೊರಭಾಗದಲ್ಲಿ ಆಯೋಜಿಸಿ, ಹೋಟೆಲ್‌ಗಳಿಗೆ ರಾತ್ರಿ 12 ರವರೆಗೆ ವ್ಯಾಪಾರ ನಡೆಸಲು ಅವಕಾಶ ನೀಡಬೇಕೆಂದು ಮೈಸುರು ಹೋಟೆಲ್ ಮಾಲೀಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಈ ಕುರಿತು ಗುರುವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಯುವ ದಸರಾದಲ್ಲಿ ವರ್ಷದಿಂದ ವರ್ಷಕ್ಕೆ ಯುವ ದಸರಾಕ್ಕೆ ಆಗಮಿಸುವ ಜನರ ಸಂಖ್ಯೆ ಹೆಚ್ಚುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.
ಈ ಹಿಂದೆ ಯುವ ದಸರಾ ಕಾರ್ಯಕ್ರಮವನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗುತ್ತಿತ್ತು. ಆದರೆ ಹೆಚ್ಚುತ್ತಿರುವ ವಾಹನ ದಟ್ಟಣೆ ಮತ್ತು ಸಾರ್ವಜನಿಕರಿಗೆ ಉಂಟಾಗುತ್ತಿದ್ದ ತೊಂದರೆಯನ್ನು ಪರಿಗಣಿಸಿ, 2024ರ ದಸರಾ ಮಹೋತ್ಸವದ ಸಂದರ್ಭದಲ್ಲಿ ಯುವ ದಸರಾವನ್ನು ನಗರದ ಹೊರಭಾಗಕ್ಕೆ ಸ್ಥಳಾಂತರಿಸಿರುವುದು ಸಾರ್ವಜನಿಕರು ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಸ್ವಾಗತಾರ್ಹ ನಿರ್ಧಾರವಾಗಿದೆ.
ಅದೇ ಮಾದರಿಯಲ್ಲಿ ದಸರಾ ಆಹಾರ ಮೇಳವನ್ನು ಸಹ ನಗರದ ಹೊರಭಾಗದಲ್ಲಿ ಸೂಕ್ತ ಹಾಗೂ ವಿಶಾಲವಾದ ಸ್ಥಳದಲ್ಲಿ ಆಯೋಜಿಸಬೇಕು ಎಂದು ಆಗ್ರಹಿಸಿದರು.
ಆಹಾರ ಮೇಳವನ್ನು ನಗರದ ಹೊರಭಾಗದಲ್ಲಿ ಆಯೋಜಿಸುವುದರಿಂದ ನಗರದ ಮಧ್ಯಭಾಗದಲ್ಲಿ ಉಂಟಾಗುವ ವಾಹನ ದಟ್ಟಣೆ, ಸಂಚಾರ ಸಮಸ್ಯೆ ಮತ್ತು ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಗಳು ಕಡಿಮೆಯಾಗುತ್ತವೆ. ಜೊತೆಗೆ ನಗರದ ಹೊರವಲಯದ ಪ್ರದೇಶಗಳಿಗೂ ಪ್ರವಾಸೋದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳ ಲಾಭ ದೊರೆಯಲಿದೆ.
ಈ ಬಾರಿಯ ದಸರಾದಲ್ಲಿ ಆಹಾರ ಮೇಳದ ಅವಧಿಯನ್ನು 15 ದಿನಗಳಿಗೆ ವಿಸ್ತರಿಸಲಾಗಿದೆ ಎಂಬುದು ದುರದೃಷ್ಟಕರ. ಆಹಾರ ಮೇಳದ ಅವಧಿಯನ್ನು ಕಳೆದ ವರ್ಷಗಳಂತೆ ಕೇವಲ 9 ದಿನಗಳಿಗೆ ಮಾತ್ರ ಸೀಮಿತಗೊಳಿಸಬೇಕು. ಆಗ ಮಾತ್ರ ಎಲ್ಲಾ ತೆರಿಗೆಗಳನ್ನು ಪಾವತಿಸಿ, ಎಲ್ಲಾ ರೀತಿಯ ಪರವಾನಗಿಗಳನ್ನು ಪಡೆದು ಹೋಟೆಲ್/ರೆಸ್ಟೋರೆಂಟ್ ನಡೆಸುವ ಮಾಲೀಕರಿಗೆ ತಮ್ಮ ದೈನಂದಿನ ವ್ಯಾಪಾರ ಮಾಡಲು ಅನುಕೂಲವಾಗುತ್ತದೆ.
ಇದೇ ಸಂದರ್ಭದಲ್ಲಿ, ದಸರಾ ಮಹೋತ್ಸವದ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೈಸೂರಿಗೆ ಆಗಮಿಸುವುದರಿಂದ ಅವರಿಗೆ ಯಾವುದೇ ಅನಾನುಕೂಲವಾಗದಂತೆ, ದಸರಾ ಅವಧಿಯಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳನ್ನು ರಾತ್ರಿ 12 ಗಂಟೆಯವರೆಗೆ ಕಾರ್ಯನಿರ್ವಹಿಸಲು ವಿಶೇಷ ಅನುಮತಿ ನೀಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ದಸರಾ ಸಂದರ್ಭದಲ್ಲಿ ರಾತ್ರಿ ವೇಳೆಯಲ್ಲಿಯೂ ಪ್ರವಾಸಿಗರು ನಗರದಲ್ಲಿ ಸಂಚರಿಸುವುದು, ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸಾಮಾನ್ಯ. ಅವರಿಗೆ ಅಗತ್ಯವಾದ ಆಹಾರ ಮತ್ತು ಆತಿಥ್ಯ ಸೇವೆಗಳು ಲಭ್ಯವಾಗುವುದು ಅತ್ಯಂತ ಮುಖ್ಯ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಿಗೆ ರಾತ್ರಿ 12 ರವರೆಗೆ ಅವಕಾಶ ನೀಡುವುದರಿಂದ ಪ್ರವಾಸಿಗರಿಗೆ ಉತ್ತಮ ಸೇವೆ ದೊರೆಯುವುದರ ಜೊತೆಗೆ ಆತಿಥ್ಯ ಉದ್ಯಮ, ಉದ್ಯೋಗ ಮತ್ತು ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೂ ಉತ್ತೇಜನ ದೊರೆಯುತ್ತದೆ ಎಂದು ತಿಳಿಸಿದರು.