
ನಂಜನಗೂಡು : ರಾಜ್ಯಾದ್ಯಾಂತ ಭೀಕರ ಬರ ಪರಿಸ್ಥಿತಿಯಲ್ಲಿ ನಮ್ಮ ಜೀವನವನ್ನು ಉಳಿಸಿಕೊಳ್ಳುವ ಸಲುವಾಗಿ ಕೆರೆಗಳನ್ನು ಸಂರಕ್ಷಿಸುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ 11 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ತಾಲೂಕಿನ ದೇವಿರಮ್ಮನಹಳ್ಳಿ ಕೆೆೆರೆಯ ನಾಮಫಲಕ ಅನಾವರಣ ಮತ್ತು ಕೆರೆಗೆ ಬಾಗಿನ ಸಮರ್ಪಿಸಿ ಗ್ರಾಮಸ್ಥರಿಗೆ ಕೆರೆಯ ಹಸ್ತಾಂತರ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.
ರಾಜ್ಯದ ಹಲವು ಭಾಗಗಳಲ್ಲಿ ಭೀಕರ ಬರಗಾಲದಿಂದ ಜನ ತತ್ತರಿಸುತ್ತಿದ್ದಾರೆ, ಮಳೆ ಬೆಳೆಯಾಗಿದೆ ರೈತಾಪಿ ವರ್ಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ ಕೆರೆಗಳ ಸಂರಕ್ಷಣೆ ಮಾಡಿ ನಮ್ಮ ಜೀವನವನ್ನು ಉಳಿಸಿಕೊಳ್ಳಲುವುದು ಅನಿವಾರ್ಯವಾಗಿದೆ, ಅಲ್ಲದೆ ಎಲಿನೂ ಪ್ರಭಾವದಿಂದ ವಿಶ್ವದಲ್ಲಿ ಜಾಗತಿಕ ತಾಪಮಾನ ಬದಲಾವಣೆಯಾಗಿದೆ, ಇದರಿಂದ ಮಳೆ ಕೊರತೆಯಾಗಿ, ಮೈಸೂರು ಜಿಲ್ಲೆಯಲ್ಲಿಯೂ ಶೆ 60% ಮಳೆಯ ಪ್ರಮಾಣ ಕಡಿಮೆಯಾಗಿದೆ, ಇಂತಹ ಸಂದರ್ಭದಲ್ಲಿ ಕೆರೆಗಳನ್ನು ತುಂಬಿಸಿ ಅವುಗಳನ್ನು ಅಭಿವೃದ್ಧಿಗೊಳಿಸುವುದೇ ನಮ್ಮ ಮುಂದಿರುವ ದಾರಿ, ಕರೆ ಅಭಿವೃದ್ಧಿಗೊಳಿಸಿದರೆ ತಾಪಮಾನ ತಂಪಾಗಿ, ಅಂತರ್ಜಲ ಹೆಚ್ಚಾಗಿ ನೀರಿನ ಅಭಾವ ಕಡಿಮೆಯಾಗುತ್ತದೆ, ಆದ್ದರಿಂದ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸುವ ಮಾತ್ರ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಕೆರೆಯ ಸಂರಕ್ಷಣೆಯ ಹಾದಿಯಲ್ಲಿ ಶ್ರೀ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಸಂಸ್ಥೆಯವರು ತಾಲೂಕಿನ ದೇವಿರಮ್ಮನಹಳ್ಳಿ ಕೆರೆಯನ್ನು 10 ಲಕ್ಷ 50 ವೆಚ್ಚದಲ್ಲಿ ಹೂಳನ್ನು ಎತ್ತಿಸಿ ಪುನಶ್ಚೇತನ ಗೊಳಿಸುವ ಮೂಲಕ ಗ್ರಾಮಸ್ಥರಿಗೆ ನೆರವಾಗಿದ್ದಾರೆ, ಕೆರೆ ಅಭಿವೃದ್ಧಿಯಿಂದ ಈ ಭಾಗದ ಜನ ಜಾನುವಾರುಗಳಿಗೆ ಕುಡಿಯುವ ನೀರಿನ ತೊಂದರೆ ತಪ್ಪಿ ಹೋಗಿ ಅಂತರ್ಜಲ ಪ್ರಮಾಣ ಹೆಚ್ಚಾಗಲಿದೆ ಎಂದು ಹೇಳಿದರು.
ಕೆರೆ ಅಭಿವೃದ್ಧಿಪಡಿಸುವ ಹಿತದೃಷ್ಟಿಯಿಂದ ಕಾಂಗ್ರೆಸ್ ಸರ್ಕಾರವು ಮೂಡ ವತಿಯಿಂದ 4 ಕೋಟಿ 72 ಲಕ್ಷಗಳನ್ನು ಬಿಡುಗಡೆಗೊಳಿಸಿದ್ದು ಟೆಂಡರ್ ಪ್ರಕ್ರಿಯೆಯ ಹಂತದಲ್ಲಿದೆ ಇದರಿಂದ ನಗರಕ್ಕೆ ಸಮೀಪದ ಕೆರೆಗಳನ್ನು ಅಭಿವೃದ್ಧಿಪಡಿಸಲಾಗುವುದು, ಅಲ್ಲದೆ ದೇವಿರಮ್ಮನಹಳ್ಳಿ ಕೆರೆಯನ್ನು ಸಹ ವಾಕಿಂಗ್ ಪಾತ್ ನಿರ್ಮಾಣ, ತಡೆಗೋಡೆ ನಿರ್ಮಾಣ ಸೇರಿದಂತೆ ಪೀಠೋಪಕರಣಗಳನ್ನು ಅಳವಡಿಸಿ ಸುಂದರ ಪರಿಸರವನ್ನಾಗಿ ರೂಪಿಸಲಾಗುವುದು ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಯೋಗೇಶ್ ಮಾತನಾಡಿ 44 ವರ್ಷಗಳ ಹಿಂದೆ ಸ್ಥಾಪಿತವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯಾದ್ಯಂತ ಮಹಿಳಾ ಸಬಲೀಕರಣ ರೈತರಿಗೆ ತರಬೇತಿ, ಮಹಿಳೆಯರಿಗೆ ಸ್ವಾವೋದ್ಯೋಗ ತರಬೇತಿ ಆರ್ಥಿಕ ಸಂಪನ್ಮೂಲಗಳನ್ನು ಒದಗಿಸುವ ಸಲುವಾಗಿ ಬ್ಯಾಂಕ್ ವತಿಯಿಂದ ಶಾಲೆ ಯೋಜನೆ, ದೇವಾಲಯ ಅಭಿವೃದ್ಧಿ ಮತ್ತು ಸರ್ಕಾರಿ ಶಾಲೆಗಳಿಗೆ ಶೌಚಾಲಯ ನಿರ್ಮಾಣ, ಅತಿಥಿ ಶಿಕ್ಷಕರ ಒದಗಿಸುವಂತಹ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ, ಸಂಸ್ಥೆಯ ವತಿಯಿಂದ ಸುಮಾರು 949 ಕೆರೆಗಳನ್ನು ಅಭಿವೃದ್ಧಿಪಡಿಸಿ ಗ್ರಾಮಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಶ್ರೀ ಗುರು ಮಲ್ಲೇಶ್ವರ ದಾಸೋಹ ಮಠ ಅಧ್ಯಕ್ಷರಾದ ಮಾದಪ್ಪ ಸ್ವಾಮಿಗಳು, ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ನಗರ ಸಭೆ ಮಾಜಿ ಅಧ್ಯಕ್ಷ ಶ್ರೀಕಂಠ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಕೆ.ಜಿ.ಮಹೇಶ್, ಮುಖಂಡರಾದ ಸೋಮಣ್ಣ, ಬೀರೇಶ್, ಸೋಮಶೇಖರ್, ಶಶಿರೇಖಾ, ಸಣ್ಣಯ್ಯ, ನಂದೀಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ವಿಜಯಕುಮಾರ್ ನಾಗನಾಳ, ತಾಲೂಕು ನಿರ್ದೇಶಕ ಧರ್ಮರಾಜ್, ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.
ಚಿತ್ರ 1
ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ 11 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ನಂಜನಗೂಡು ತಾಲೂಕಿನ ದೇವಿರಮ್ಮನಹಳ್ಳಿ ಕೆರೆಗೆ ಶಾಸಕ ದರ್ಶನ್ ದ್ರುವ ನಾರಾಯಣ ಬಾಗಿನ ಅರ್ಪಿಸಿದರು