
ಮೈಸೂರು; ಅರಮನೆ ನಗರಿ ಮೈಸೂರಿನಾದ್ಯಾಂತ ಅನಧಿಕೃತ ಪ್ಲೆಕ್ಸ್ ಬ್ಯಾನರ್ಗಳು, ಜಾಹೀರಾತು ಫಲಕಗಳು (ಹೋರ್ಡಿಂಗಳು) ಮತ್ತು ಡಿಜಿಟಲ್ ಬೋರ್ಡ್ ಗಳ ಅತಿಯಾದ ಹರಡುವಿಕೆಯ ಬಗ್ಗೆ ಮೈಸೂರು ಗ್ರಾಹಕರ ಪರಿಷತ್ ತೀವ್ರ ಕಳವಳ ವ್ಯಕ್ತಪಡಿಸಿದೆ.
ಅನಧಿಕೃತ ಬ್ಯಾನರ್ಗಳು, ಹೋರ್ಡಿಂಗಳು ಮತ್ತು ಡಿಜಿಟಲ್ ಬೋರ್ಡ್ ಗಳ ಮೂಲಕ ನಗರದ ಸೌಂದರ್ಯಕ್ಕೆ ಧಕ್ಕೆ ತರುವುದು ರಾಜ್ಯದ ಅಸ್ತಿತ್ವದಲ್ಲಿರುವ ಕಾನೂನುಗಳ ನೇರ ಉಲ್ಲಂಘನೆಯಾಗಿದೆ ಎಂಬುದನ್ನು ಮೈಸೂರು ನಗರ ಪಾಲಿಕೆಗೆ ನೆನಪಿಸಬೇಕಾಗಿ ಬಂದಿರುವುದು ವಿಷಾದನೀಯ. ಈ ಅನಧಿಕೃತ ಪ್ರದರ್ಶನಗಳ ಹಿಂದೆ ಯಾರೇ ಇದ್ದರೂ, ಐತಿಹಾಸಿಕ ನಗರದ ಅರಮನೆಗಳು, ಸಾರ್ವಜನಿಕ ಉದ್ಯಾನವನಗಳು ಮತ್ತು ಹಸಿರಿನ ಸೊಬಗನ್ನು ಉಳಿಸಿಕೊಳ್ಳಲು ಪಾಲಿಕೆಯು ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕೆಂದು ಪರಿಷತ್ನ ಸಂಸ್ಥಾಪಕ ಅಧ್ಯಕ್ಷ ಭಾಮೈ ಶೆಣೈ ಬುಧವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
‘ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವಿಕೆ ತಡೆ ಕಾಯ್ದೆ, 1981 ರ ಸ್ಪಷ್ಟ ಆದೇಶಗಳ ಹೊರತಾಗಿಯೂ, ಅನಧಿಕೃತ ಬ್ಯಾನರ್ಗಳು ಮತ್ತು ಫೆಕ್ಷಳು ನಗರದ ಪ್ರಮುಖ ವೃತ್ತಗಳು ಮತ್ತು ಪರಂಪರೆ ವಲಯಗಳ ಸೌಂದರ್ಯಕ್ಕೆ ಧಕ್ಕೆ ತರುತ್ತಲೇ ಇವೆ. ಈ ಕಾಯ್ದೆಯ ಅಡಿಯಲ್ಲಿ, ಅನಧಿಕೃತ ಸಾರ್ವಜನಿಕ ಜಾಹೀರಾತುಗಳು ಶಿಕ್ಷಾರ್ಹ ಅಪರಾಧವಾಗಿದ್ದು, ಇದಕ್ಕೆ ಜೈಲು ಶಿಕ್ಷೆ, ಭಾರಿ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ.
ಇದಲ್ಲದೆ, ರಾಜ್ಯ ಶಾಸಕಾಂಗವು ‘ಕರ್ನಾಟಕ ಪುರಸಭೆಗಳು ಮತ್ತು ಇತರ ಕೆಲವು ಕಾನೂನುಗಳ (ತಿದ್ದುಪಡಿ) ಮಸೂದೆ’ಯನ್ನು ಅಂಗೀಕರಿಸಿದ್ದು, ಇದು ಹೊರಾಂಗಣ ಜಾಹೀರಾತುಗಳ ಮೇಲಿನ ನಿಯಮಾವಳಿಗಳನ್ನು ಹೆಚ್ಚು ಬಿಗಿಗೊಳಿಸಿದೆ. ಈ ಇತ್ತೀಚಿನ ತಿದ್ದುಪಡಿಯು ಜಾರಿ ಪ್ರಕ್ರಿಯೆಯನ್ನು ಆಮೂಲಾಗ್ರವಾಗಿ ಬದಲಾಯಿಸಿದೆ; ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿನ ಅನಧಿಕೃತ ಪ್ರದರ್ಶನಗಳ ವಿರುದ್ಧ ಕ್ರಮ ಕೈಗೊಳ್ಳಲು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲು ಮತ್ತು ತೆರವುಗೊಳಿಸುವಿಕೆಯ ವೆಚ್ಚವನ್ನು ಬಲವಂತವಾಗಿ ವಸೂಲಿ ಮಾಡಲು ನಗರ ಸ್ಥಳೀಯ ಸಂಸ್ಥೆಗಳಿಗೆ ಸ್ಪಷ್ಟ ಅಧಿಕಾರವನ್ನು ನೀಡಿದೆ.
ನಿಯಂತ್ರಣವಿಲ್ಲದ ಜಾಹೀರಾತು ಪ್ರದರ್ಶನಗಳಿಗಾಗಿ ನಗರದ ಸೌಂದರ್ಯ ಮತ್ತು ಪಾದಚಾರಿಗಳ ಸುರಕ್ಷತೆಯನ್ನು ಬಲಿಕೊಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇತ್ತೀಚಿನ ವರ್ಷಗಳಲ್ಲಿ, ರಾಜಕೀಯ ಜಾಹೀರಾತುಗಳು ಹಾಗೂ ಹುಟ್ಟುಹಬ್ಬ, ನೂತನವಾಗಿ ಆಯ್ಕೆಯಾದ ರಾಜಕೀಯ ನಾಯಕರ ಸ್ವಾಗತ ಅಥವಾ ಇತರೆ ಸಾಧನೆಗಳನ್ನು ಆಚರಿಸುವ ಹೋರ್ಡಿಂಗಳಿAದ ಪಮುಖ ಸಾರ್ವಜನಿಕ ಸ್ಥಳಗಳು ವಿರೂಪಗೊಂಡಿವೆ. ನಿಯಮದಂತೆ ದಂಡ ವಿಧಿಸುವುದು ಹಾಗಿರಲಿ, ಪಾಲಿಕೆಯು ಈ ಬಗ್ಗೆ ಯಾವುದೇ ಆಕ್ಷೇಪಣೆಯನ್ನೂ ವ್ಯಕ್ತಪಡಿಸದಿರುವುದು ಆಘಾತಕಾರಿ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪರಿಷತ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.