
ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ
ಪಿರಿಯಾಪಟ್ಟಣ : ಮಾಧ್ಯಮ ಕ್ಷೇತ್ರಕ್ಕೆ ತನ್ನದೇ ಆದ ಸಾಮಾಜಿಕ ಜವಾಬ್ದಾರಿ ಇದೆ ಎಂದು ಶಾಸಕ ಕೆ. ವೆಂಕಟೇಶ್ ತಿಳಿಸಿದರು.
ಪಟ್ಟಣದ ಡಿ.ದೇವರಾಜ ಅರಸು ಭವನದಲ್ಲಿ ಪಿರಿಯಾಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪತ್ರಕರ್ತರು ಎಂದಿಗೂ ಸತ್ಯಾಂಶವನ್ನು ತಿಳಿಸಬೇಕು. ಇಲ್ಲಸಲ್ಲದ ಆರೋಪಗಳನ್ನು ಮಾತ್ರ ಬಿತ್ತರಿಸಿದರೆ ಜನರನ್ನು ದಿಕ್ಕು ತಪ್ಪಿಸುವ ಕೆಲಸವಾಗುತ್ತದೆ. ಸಾಕಷ್ಟು ಸುಧಾರಣೆಗಳು ಮಾಧ್ಯಮದ ಸುದ್ದಿಗಳಿಂದ ಆಗಿದೆ. ನಾನು ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತಿದ್ದರು ಕೂಡ ಯಾರೋ ಒಬ್ಬರು ಹೇಳುವ ಇಲ್ಲಸಲ್ಲದ ಆರೋಪಗಳನ್ನು ನನ್ನ ಸ್ಪಷ್ಟನೆ ಕೇಳದೆ ಪ್ರಕಟಿಸುತ್ತಿರುವುದು ಬೇಸರದ ಸಂಗತಿಯಾಗಿದೆ. ನಾನು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ ನನ್ನ ಅಭಿವೃದ್ಧಿ ಕಾರ್ಯಗಳಿಗೆ ಮಾಧ್ಯಮದವರು ಸಹಕಾರ ನೀಡಬೇಕು. ಪತ್ರಕರ್ತರ ಸಂಘದ ಭವನ ನಿರ್ಮಾಣಕ್ಕೆ ನಿವೇಶನವನ್ನು ಮಂಜೂರು ಮಾಡಿಸಿ ಕೊಡುತ್ತೇನೆ ಎಂದರು.
ಸಂಘದ ಜಿಲ್ಲಾಧ್ಯಕ್ಷ ಕೆ.ದೀಪಕ್ ಮಾತನಾಡಿ ಮಾಧ್ಯಮ ಕ್ಷೇತ್ರವು ಇಂದು ಸಾಕಷ್ಟು ಗಂಭೀರ ಸಮಸ್ಯೆಗಳನ್ನು ಅನುಭವಿಸುತ್ತಿದೆ, ಆದರೂ ಕೂಡ ಇವುಗಳನ್ನು ಮೆಟ್ಟಿ ಸಾಮಾಜಿಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಶ್ರಮಿಸುತ್ತಿದೆ. ಸಾಕಷ್ಟು ತಂತ್ರಜ್ಞಾನಗಳು ಇಂದು ಆತುರದ ಸುದ್ದಿಗಳನ್ನು ಬಿತ್ತರಿಸಿ ಜನರಿಗೆ ಗೊಂದಲವನ್ನು ಸೃಷ್ಟಿ ಮಾಡುತ್ತಿದೆ. ವಸ್ತುನಿಷ್ಠ ಮತ್ತು ಪಾರದರ್ಶಕ ಸುದ್ದಿಗಳನ್ನು ಜನರಿಗೆ ತಲುಪಿಸುವ ಕೆಲಸವನ್ನು ಮಾಧ್ಯಮ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪಡೆದ ಗಣ್ಯರನ್ನು, ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಯಶಾಲಿಯಾದ ತಂಡಗಳನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ನಿರ್ದೇಶಕ ರಾಘವೇಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮಪುರ ನಾರಾಯಣ, ದಾ.ರಾ ಮಹೇಶ್, ವಿಜಯ್, ತಾಲೂಕು ಅಧ್ಯಕ್ಷ ರವಿಚಂದ್ರ ಪ್ರಧಾನ ಕಾರ್ಯದರ್ಶಿ ಮಲ್ಲೇಶ್, ದೇವೇಗೌಡ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಈಚೂರು ಲೋಕೇಶ್, ಪ್ರಕಾಶ್, ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಕೃಷ್ಣೇಗೌಡ, ಪ್ರಾಂಶುಪಾಲ ಸೋಮಶೇಖರ್, ಪೊಲೀಸ್ ವೃತ್ತ ನಿರೀಕ್ಷಕ ದೀಪಕ್, ಮುಖಂಡರಾದ ನಂದೀಶ್, ಯಾದವ್ ಸೇರಿದಂತೆ ಪತ್ರಕರ್ತರು ಹಾಜರಿದ್ದರು.