
ಮೈಸೂರು: ಕಳೆದ ಎರಡು ದಿನಗಳಿಂದ ಮೈಸೂರು ಜಿಲ್ಲೆಯ ತಿ. ನರಸೀಪುರ ಭಾಗದಲ್ಲಿ ತಮಿಳು ಚಿತ್ರವೊಂದರ ಚಿತ್ರೀಕರಣದಲ್ಲಿ ಭಾಗವಹಿಸಲು ಆಗಮಿಸಿರುವ ಖ್ಯಾತ ಚಿತ್ರ ನಟ ತಲೈವಾ ರಜನಿಕಾಂತ್ ಮೈಸೂರಿನಲ್ಲೇ ವಾಸ್ತವ್ಯ ಹೂಡಿದ್ದು, ಬುಧವಾರ ಚಿತ್ರೀಕರಣಕ್ಕೆ ತೆರಳುವ ಮುನ್ನ ನಗರದ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ನಾಡ ಅಧಿದೇವತೆ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು, ಪ್ರಾರ್ಥನೆ ಸಲ್ಲಿಸಿದರು. ಯಾವುದೇ ಮಾಹಿತಿ ನೀಡದೇ ದಿಢೀರನೆ ಚಾಮುಂಡಿಬೆಟ್ಟಕ್ಕೆ ಆಗಮಿಸಿದ ಸೂಪರ್ ಸ್ಟಾರ್ ರಜನಿಕಾಂತ್ ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ ದೇವಾಲಯದ ಒಳಗಿರುವ ವಿನಾಯಕ ಹಾಗೂ ಹನುಮಾನ್ ದೇವರ ದರ್ಶನವನ್ನು ಪಡೆದು ದೇವಾಲಯದಿಂದ ಹೊರ ಬಂದಾಗ, ರಜನಿಕಾಂತ್ ಅವರನ್ನು ನೋಡಿ ಅಚ್ಚರಿಗೊಂಡ ಸಾರ್ವಜನಿಕರು, ಭಕ್ತರು ಕೂಗಿ ಹರ್ಷ ವ್ಯಕ್ತಪಡಿಸಿದರು. ಅವರತ್ತ ಕೈಬೀಸಿದ ರಜನಿಕಾಂತ್ ನಗು, ನಗುತ್ತಲೇ ಅಲ್ಲಿಂದ ಹೊರಟರು. ಈ ದೃಶ್ಯವನ್ನು ಭಕ್ತರು ಮೊಬೈಲ್ ನಲ್ಲಿ ಸೆರೆಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಸೂಪರ್ ಸ್ಟಾರ್ ರಜನಿಕಾಂತ್ ಬುಧವಾರ ಬೆಳಗ್ಗೆ ಚಾಮುಂಡಿಬೆಟ್ಟಕ್ಕೆ ಆಗಮಿಸಿ ನಾಡ ಅಧಿದೇವತೆಗೆ ಪೂಜೆ ಸಲ್ಲಿಸಿದರು. ಅವರು ನಮ್ಮ ದೇವಸ್ಥಾನಕ್ಕೆ ಬರುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯಾರಿಗೂ ನೀಡಿರಲಿಲ್ಲ. ಚಾಮುಂಡಿಬೆಟ್ಟದ ಸಂಪ್ರದಾಯದAತೆ ಸೂಪರ್ ಸ್ಟಾರ್‌ಗೆ ಸಾಂಪ್ರದಾಯಿಕ ಶಾಲು ಹಾಗೂ ಹಾರ ಹಾಕಿ ಗೌರವಿಸಲಾಯಿತು. ಪೂಜೆ ಸಲ್ಲಿಸಿದ ನಂತರ ಎಲ್ಲಾ ಅರ್ಚಕರನ್ನು ಆತ್ಮೀಯವಾಗಿ ಮಾತನಾಡಿಸಿದರು. ಕೆಲವು ಅರ್ಚಕರು ಅವರೊಂದಿಗೆ ಫೋಟೋ ಸಹ ತೆಗೆಸಿಕೊಂಡರು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಡಾ. ಶಶಿಶೇಖರ್ ದೀಕ್ಷಿತ್ ತಿಳಿಸಿದರು.
ರಜನಿಕಾಂತ್ ಚಾಮುಂಡಿಬೆಟ್ಟಕ್ಕೆ ಆಗಮಿಸಿರುವ ಸುದ್ದಿ ತಿಳಿದ ಅವರ ಅಭಿಮಾನಿಗಳು ಅವರನ್ನು ನೋಡಲು ಬೆಟ್ಟಕ್ಕೆ ಆಗಮಿಸಿದ್ದು, ಕೆಲವು ಕಾಲ ಸಣ್ಣ ನೂಕುನುಗ್ಗಲು ಸಹ ಸಂಭವಿಸಿತ್ತು. ರಜನಿಕಾಂತ್ ಅಭಿಮಾನಿಗಳಿಗೆ ಕೈಬೀಸಿ ತೆರಳಿದರು. ಇದಕ್ಕೂ ಮುನ್ನಾ ರಜಿನಿಕಾಂತ್ ಅವರು ತಿ.ನರಸೀಪುರದ ಐತಿಹಾಸ ಸ್ಥಳ ಸೋಮನಾಥ ಪುರಕ್ಕೆ ಭೇಟಿ ನೀಡಿ, ಅಲ್ಲಿನ ದೇವಸ್ಥಾನವನ್ನು, ಅಲ್ಲಿರುವ ಕೆತ್ತನೆಯ ಕಲಾಕೃತಿಗಳನ್ನು ವೀಕ್ಷಿಸಿದರು.