
ಮೈಸೂರು: ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಆಯೋಜನೆ ಮಾಡಿರುವುದನ್ನು ವಿರೋಧಿಸಿ ಅ ೬ರಂದು ಕಂಬಳ ನಡೆಯುವ ಸ್ಥಳದಲ್ಲಿ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ಪರಿಸರಕ್ಕಾಗಿ ನಾವು ಸಂಘಟನೆ ಪ್ರಧಾನ ಕಾರ್ಯದರ್ಶಿ ಪರಶುರಾಮೇಗೌಡ ತಿಳಿಸಿದರು.
ಶನಿವಾರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕಾಗಿ ನಾಡ ಹಬ್ಬ ಮೈಸೂರು ದಸರಾ ಸಂದರ್ಭದಲ್ಲಿ ಕಂಬಳ ಆಯೋಜನೆ ಮಾಡಲಾಗಿದೆ. ಇದಕ್ಕೆ ಕೆಲ ಸಂಘಟನೆಗಳು, ಪರಿಸರವಾದಿಗಳು, ಕನ್ನಡ ಪರ ಹೋರಾಟಗಾರರು ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿ, ಕಂಬಳ ನಡೆಸುವುದು ಬೇಡವೆಂದು ಮನವಿ ಸಲ್ಲಿಸಿದರೂ, ಸರ್ಕಾರ ಜಿದ್ದಿಗೆ ಬಿದ್ದು ಕಂಬಳ ಆಯೋಜಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಂಬಳ ಆಯೋಜನೆ ಹಿಂದೆ ವೈಯಕ್ತಿಕ ಲಾಭ, ರಾಜಕೀಯ ಪ್ರತಿಷ್ಠೆ ಇದೆಯೇ ಹೊರತು ಬೇರೇನು ಇಲ್ಲ. ಪುತ್ತೂರು ಶಾಸಕ ಹರೀಶ್ ರೈ ತಮ್ಮ ರಾಜಕೀಯ ಲಾಭಕ್ಕಾಗಿ ಕಂಬಳವನ್ನು ಬಳಸಿಕೊಳ್ಳುತ್ತಿದ್ದಾರೆ. ಕಂಬಳವನ್ನು ರಾಜ್ಯವ್ಯಾಪಿ ಆಯೋಜಿಸಿ ಆ ಮೂಲಕ ತಮ್ಮ ವೈಯಕ್ತಿಕ ಇಮೇಜ್ ಹೆಚ್ಚಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಗೆಲ್ಲಲು ಇಷ್ಟೆಲ್ಲಾ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಇದೇ ಅ. ೬ರ ಮಂಗಳವಾರ ಬೆಳಗ್ಗೆ ೧೦ ಗಂಟೆಗೆ ಕಂಬಳ ನಡೆಯುವ ಸ್ಥಳದಲ್ಲಿ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪರಿಸರವಾದಿ ಭಾನು ಮೋಹನ್ ಮಾತನಾಡಿ, ಕಂಬಳ ಆಯೋಜನೆ ಮಾಡುತ್ತಿರುವ ಜಾಗದಲ್ಲಿ ಸಣ್ಣಪುಟ್ಟ ಮರಗಳು ಸೇರಿದಂತೆ ನೂರಾರು ಮರಗಳನ್ನು ಕಡಿಯಲಾಗಿದೆ. ಆ ಜಾಗದಲ್ಲಿದ್ದ ಕೆರೆಯ ಅಂಗಳವನ್ನು ಮುಚ್ಚಲಾಗಿದೆ. ಇಲ್ಲಿ ಅಳಿಲು, ಇಲಿ, ಮೊಲ ಸೇರಿದಂತೆ ಸಣ್ಣಪುಟ್ಟ ಪ್ರಾಣಿಗಳ, ಹಲವು ಪ್ರಭೇದದ ಪಕ್ಷಿಗಳ, ಕ್ರಿಮಿಕೀಟಗಳ ಜೀವ ಪರಿಸರ ವ್ಯವಸ್ಥೆ ರೂಪುಗೊಂಡಿತ್ತು. ಈಗ ಎಲ್ಲವನ್ನೂ ನಾಶ ಮಾಡಲಾಗಿದೆ. ಉದ್ಯಾನವನಕ್ಕೆ ಮೀಸಲಾಗಿದ್ದ ಈ ಜಾಗವನ್ನು ಕಂಬಳ ಆಯೋಜನೆಗಾಗಿ ದುರ್ಬಳಕೆ ಮಾಡಿದ್ದು ಸರ್ಕಾರದ ಪರಿಸರ ವಿರೋಧಿ ಕೆಲಸ. ಕಾನೂನು ಹೋರಾಟದ ಮೂಲಕವಾದರೂ ದಸರಾ ಸಂದರ್ಭದಲ್ಲಿ ಕಂಬಳವನ್ನು ತಡೆಯಲು ಪ್ರಯತ್ನಿಸಲಾಗುವುದು ಎಂದರು.