
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ. ಜಯಂತ ಕುಮಾರ್ ಅವರಿಂದ ಸ್ವಚ್ಛತಾ ಲಾಂಛನ' ಅನಾವರಣ
ಮೈಸೂರು: ಮೈಸೂರು ನಗರದ ನ್ಯಾಯಾಂಗ ಇಲಾಖೆ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛತಾ ಹಿ ಸೇವಾ’ ಅಭಿಯಾನದ ಅಂಗವಾಗಿ ಹಳೆಯ ನ್ಯಾಯಾಲಯ ಸಂಕೀರ್ಣ ಮತ್ತು ಜಯನಗರದ ಮಳಲವಾಡಿಯಲ್ಲಿರುವ ಹೊಸ ನ್ಯಾಯಾಲಯ ಸಂಕೀರ್ಣದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನ ನಡೆಯಿತು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಯಂತ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಅಭಿಯಾನದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಸವಿತಾ ಎಂ.ಕೆ., ಜಿಲ್ಲಾ ನ್ಯಾಯಾಧೀಶರು, ಹಿರಿಯ ಸಿವಿಲ್ ನ್ಯಾಯಾಧೀಶರು, ಸಿವಿಲ್ ನ್ಯಾಯಾಧೀಶರು ಹಾಗೂ ಇತರ ನ್ಯಾಯಾಂಗ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದರು.ಸ್ವಚ್ಛತಾ ಲಾಂಛನ' ಅನಾವರಣ; ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ. ಜಯಂತ ಕುಮಾರ್ ಅವರು ಮೈಸೂರು ಮಹಾನಗರ ಪಾಲಿಕೆಯ ನೂತನ ಸ್ವಚ್ಛತಾ ಲಾಂಛನ’ವನ್ನು ಅನಾವರಣಗೊಳಿಸಿದರು.
ಸ್ವಚ್ಛ, ಸುಂದರ ಹಾಗೂ ಆರೋಗ್ಯಕರ ಮೈಸೂರು ನಿರ್ಮಾಣದ ಸಂಕಲ್ಪವನ್ನು ಪ್ರತಿಬಿಂಬಿಸುವ ಈ ಲಾಂಛನವು ನಗರದ ಸ್ವಚ್ಛತಾ ಅಭಿಯಾನಗಳಿಗೆ ವಿಶಿಷ್ಟ ಗುರುತು ನೀಡುವುದರ ಜೊತೆಗೆ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿದೆ.
`ಸ್ವಚ್ಛ ಮೈಸೂರು – ನಮ್ಮ ಹೆಮ್ಮೆ, ನಮ್ಮ ಆದ್ಯತೆ’ ಎಂಬ ಸಂದೇಶವನ್ನು ಸಾರ್ವಜನಿಕರಿಗೆ ತಲುಪಿಸುವ ಆಶಯದೊಂದಿಗೆ ಲಾಂಛನವನ್ನು ಅನಾವರಣಗೊಳಿಸಲಾಯಿತು. ನಗರದ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರತಿಯೊಬ್ಬ ನಾಗರಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ನ್ಯಾಯಾಂಗ ಅಧಿಕಾರಿಗಳು, ವಕೀಲರು ಹಾಗೂ ಪಾಲಿಕೆ ಸಿಬ್ಬಂದಿ, ಮೈಸೂರು ವಕೀಲರ ಸಂಘದ ಅಧ್ಯಕ್ಷರಾದ ಎಸ್. ಲೋಕೇಶ್, ಕಾರ್ಯದರ್ಶಿಯಾದ ಎ.ಜಿ. ಸುಧೀರ್ ಹಾಗೂ ಸಂಘದ ಸದಸ್ಯರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.
ನ್ಯಾಯಾಲಯದ ಪ್ರಭಾರ ಮುಖ್ಯ ಆಡಳಿತಾಧಿಕಾರಿಗಳು, ನ್ಯಾಯಾಲಯ ವ್ಯವಸ್ಥಾಪಕರು, ಶಿರಸ್ತೇದಾರರು, ಅಟೆಂಡರ್ಗಳು, ಜವಾನರು ಹಾಗೂ ಸ್ವಚ್ಛತಾ ಸಿಬ್ಬಂದಿ, ಮೈಸೂರು ಮಹಾನಗರ ಪಾಲಿಕೆಯ ವಲಯ ಕಚೇರಿ-2 ಮತ್ತು 3ರ ಸಹಾಯಕ ಆಯುಕ್ತರು, ಕಾರ್ಯಪಾಲಕ ಅಭಿಯಂತರರು (ಪರಿಸರ), ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ ಅಭಿಯಂತರರು (ಪರಿಸರ), ಪರಿಸರ ಅಭಿಯಂತರರು, ಆರೋಗ್ಯ ನಿರೀಕ್ಷಕರು, ಮೇಲ್ವಿಚಾರಕರು ಹಾಗೂ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ನಗರ ಪಾಲಿಕೆಯ ವಾಹನಗಳು ಮತ್ತು ಯಂತ್ರೋಪಕರಣಗಳನ್ನು ಬಳಸಿಕೊಂಡು ಎರಡೂ ನ್ಯಾಯಾಲಯ ಸಂಕೀರ್ಣಗಳ ಆವರಣಗಳಲ್ಲಿ ಸಮಗ್ರ ಸ್ವಚ್ಛತಾ ಕಾರ್ಯಾಚರಣೆ ನಡೆಸಲಾಯಿತು. ಸಂಗ್ರಹವಾಗಿದ್ದ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ನಿರ್ಮಿಸಲು ಆದ್ಯತೆ ನೀಡಲಾಯಿತು.
ಸ್ವಚ್ಛತಾ ಪ್ರತಿಜ್ಞೆ, ತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ;
ಕಾರ್ಯಕ್ರಮದ ಸಂದರ್ಭದಲ್ಲಿ ನ್ಯಾಯಾಂಗ ಅಧಿಕಾರಿಗಳು, ವಕೀಲರು, ನ್ಯಾಯಾಲಯದ ಸಿಬ್ಬಂದಿ, ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಪೌರಕಾರ್ಮಿಕರಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಲಾಯಿತು.
ಘನತ್ಯಾಜ್ಯ ನಿರ್ವಹಣಾ ನಿಯಮಗಳು 2026 ಕುರಿತು ಮಾಹಿತಿ ವಿನಿಮಯ ನಡೆಸಿ, ಮೂಲದಲ್ಲಿಯೇ ತ್ಯಾಜ್ಯ ವಿಂಗಡಣೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ, ಸಾರ್ವಜನಿಕ ಸ್ಥಳಗಳ ಸ್ವಚ್ಛತೆ ಹಾಗೂ ಸ್ವಚ್ಛ ಪರಿಸರ ನಿರ್ಮಾಣದಲ್ಲಿ ನಾಗರಿಕರ ಪಾತ್ರದ ಕುರಿತು ಜಾಗೃತಿ ಮೂಡಿಸಲಾಯಿತು. ಸ್ವಚ್ಛತೆ ಒಂದು ದಿನದ ಅಭಿಯಾನಕ್ಕೆ ಸೀಮಿತವಾಗದೆ, ಪ್ರತಿಯೊಬ್ಬರ ದೈನಂದಿನ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಸಾರಲಾಯಿತು.