
ಮಳೆ ಅಡಚಣೆ; ದಿಢೀರ್ ಬದಲಾವಣೆ
ಜೆಎಸ್ಎಸ್ ಮಂಟಪದಲ್ಲಿ ಅದ್ಧೂರಿ ಆಚರಣೆ
ನಂಜನಗೂಡು: ಭಾನುವಾರ ಮುಂಜಾನೆ ಸುರಿದ ಧಾರಾಕಾರ ಮಳೆಗೆ ಗ್ರಾಮೀಣ ಯೋಗ ದಸರಾ ರದ್ದಾಗಬೇಕಿತ್ತು. ಆದರೆ ಮಳೆಯ ನಡುವೆಯೂ ಕ್ಷಣಮಾತ್ರದಲ್ಲಿ ತೆಗೆದುಕೊಂಡ ನಿರ್ಧಾರ ಹಾಗೂ ಸುತ್ತೂರು ಶ್ರೀಮಠದ ನೆರವಿನಿಂದ ಗ್ರಾಮೀಣ ಯೋಗ ದಸರಾ ನಿಗದಿಯಂತೆ ಯಶಸ್ವಿಯಾಯಿತು.
ನಗರ ಪ್ರದೇಶ ಹಾಗೂ ಗ್ರಾಮೀಣ ಭಾಗದಿಂದ ಬಂದಿದ್ದ ಯೋಗಬಂಧುಗಳು ಯೋಗ ನೃತ್ಯರೂಪಕ ಪ್ರದರ್ಶಿಸುವ ಮೂಲಕ ಕಳೆಗಟ್ಟಿಸಿದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಭಾನುವಾರ ಮುಂಜಾನೆ 6 ಗಂಟೆಗೆ ಯೋಗ ದಸರಾ ಉಪಸಮಿತಿ ವತಿಯಿಂದ ಗ್ರಾಮೀಣ ಯೋಗ ದಸರಾ ಕಾರ್ಯಕ್ರಮಕ್ಕಾಗಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿತ್ತು. ಭಾನುವಾರ ಮುಸುಕಿನ ಜಾವದಲ್ಲಿ ಧಾರಾಕಾರ ಮಳೆಯಾಗಿ ಕ್ರೀಡಾಂಗಣ ತುಂಬೆಲ್ಲಾ ನೀರು ತುಂಬಿತ್ತು. ಮಳೆಯೂ ಕೂಡ ಮುಂದುವರೆದಿತ್ತು. ಆದರೆ, ಬಹಳ ಆಸಕ್ತಿಯಿಂದ ತಾಲೂಕಿನ ನಾನಾ ಗ್ರಾಮಗಳಿಂದ ಹಾಗೂ ನಗರ ಪ್ರದೇಶದಿಂದ ನೂರಾರು ಯೋಗಬಂಧುಗಳು ಮಳೆಯ ನಡುವೆಯೂ ಕ್ರೀಡಾಂಗಣದಲ್ಲಿ ಕಿಕ್ಕಿರಿದು ನಿಂತಿದ್ದರು.
ಮಳೆಯಿಂದಾಗಿ ಈಗಾಗಲೇ ಯುವದಸರಾ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಭಂಗ ಉಂಟಾಗಿದ್ದರಿಂದ ಅದೇ ರೀತಿ ಗ್ರಾಮೀಣ ಯೋಗ ದಸರಾವೂ ಕೂಡ ರದ್ದಾಗಬಹುದು ಎಂದು ಅಲ್ಲಿ ನೆರೆದಿದ್ದವರ ಊಹೆಯಾಗಿತ್ತು. ಆದರೆ, ಆ ಕ್ಷಣಮಾತ್ರದಲ್ಲಿ ತೆಗೆದುಕೊಂಡ ನಿರ್ಧಾರ ಎಲ್ಲರ ಊಹೆಯನ್ನು ಹುಸಿಗೊಳಿಸಿ ಕಾರ್ಯಕ್ರಮ ಯಶಸ್ವಿಯಾಗಿಯೇ ನಡೆದಿದ್ದು ಒಂದು ಪವಾಡ ಎಂಬಂತೆ ಭಾಸವಾಯಿತು.
ಕೂಡಲೇ ಸುತ್ತೂರು ಶ್ರೀಮಠವು ಸಮೀಪದಲ್ಲೇ ಇದ್ದ ಜೆಎಸ್ಎಸ್ ಮಂಗಳ ಮಂಪಟದಲ್ಲಿ ಕಾರ್ಯಕ್ರಮ ಆಯೋಜನೆಗೆ ಅಗತ್ಯ ನೆರವು ನೀಡಿದ ಪರಿಣಾಮವಾಗಿ ಅರ್ಧತಾಸಿನಲ್ಲೇ ನಿಗದಿತ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಯೋಗೋಲ್ಲಾಸದಲ್ಲಿ ಮಿಂದೆದ್ದ ಪಟುಗಳು
ಗ್ರಾಮೀಣ ಯೋಗ ದಸರಾವನ್ನು ನಡೆಸಿಕೊಟ್ಟ ಯೋಗ ಮಹಾಮನೆಯ ಪ್ರಧಾನ ಯೋಗಶಿಕ್ಷಕ ಪ್ರಕಾಶ್ ಜಿ.ಉಡಿಗಾಲ ನೆರೆದಿದ್ದ ನೂರಾರು ಯೋಗಪಟುಗಳು ಯೋಗೋಲ್ಲಾಸದಲ್ಲಿ ಮಿಂದೆದ್ದರು. ಆರಂಭದಲ್ಲಿ ಹಲವು ಆಸನ ಭಂಗಿಗಳನ್ನು ಮಾಡಿಸಿದ ಬಳಿಕ ಆನಂದ ಯೋಗದಲ್ಲಿ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದರು. ಮಿದುಳು ಚುರುಕುಗೊಳಿಸುವ ಕ್ರಿಯೆಗಳನ್ನು ಮಾಡಿಸುವ ಮೂಲಕ ಎಲ್ಲರನ್ನು ಚೈತನ್ಯಶೀಲರನ್ನಾಗಿಸಿದರು.
ಕಣ್ಮನ ಸೆಳೆದ ನೃತ್ಯರೂಪಕ
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ ಯೋಗಪಟುಗಳು ಸಾಮೂಹಿಕ ಯೋಗ ನೃತ್ಯ ರೂಪಕ ಪ್ರದರ್ಶನ ಕಣ್ಮನ ಸೆಳೆಯಿತು. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರು ಕೂಡ ನೃತ್ಯರೂಪಕದಲ್ಲಿ ಭಾಗವಹಿಸಿ ನೆರೆದಿದ್ದವರನ್ನು ಆಶ್ಚರ್ಯಚಕಿತಗೊಳಿಸಿದರು.
ಆಯುಷ್ ಇಲಾಖೆ ಮೊದಲ ಬಾರಿಗೆ ಪೈಲೆಟ್ ಯೋಜನೆಯಾಗಿ ಯೋಗ ಹಬ್ ಕಾರ್ಯಕ್ರಮವನ್ನು ನಂಜನಗೂಡಿನಲ್ಲಿ ಪ್ರಾಯೋಗಿಕವಾಗಿ ರೂಪಿಸಿದ್ದು, ಆ ಯೋಗ ಕೇಂದ್ರಗಳ ಮಕ್ಕಳು, ಮಹಿಳೆಯರು, ಪುರುಷಕರು ಪಾಲ್ಗೊಂಡು ಗಮನ ಸೆಳೆದರು.
ತಾಲೂಕಿನ ಕೊರೆಹುಂಡಿ, ಕೆಂಪಿಸಿದ್ದನಹುಂಡಿ, ಹುಳಿಮಾವು, ಚಾಮಲಾಪುರಹುಂಡಿ, ತಾಂಡವಪುರ, ದೇವೀರಮ್ಮನಹಳ್ಳಿ, ಹಂಡುವಿನಹಳ್ಳಿ, ಕಸ್ತೂರಬಾ ಶಾಲೆಯ ಮಕ್ಕಳ ನೃತ್ಯರೂಪಕ ಮನಸೂರೆಗೊಳಿಸಿತು. ಯೋಗ ಮಹಾಮನೆಯ ಯೋಗ ಶಿಕ್ಷಕಿಯರು ದುರ್ಗಾ ನಮಸ್ಕಾರ ನೃತ್ಯರೂಪಕ ವಿಶೇಷವಾಗಿತ್ತು.
ಸ್ಮಾರ್ಟ್ ಫೋನ್ ಗೀಳಿಂದ ಹೊರಬರಲಿ: ದರ್ಶನ್. ಧ್ರುವನಾರಾಯಣ
ಸ್ಮಾರ್ಟ್ ಫೋನ್ ಗೀಳಿನಿಂದ ಮಕ್ಕಳನ್ನು ಹೊರತರಲು ಯೋಗ, ಧ್ಯಾನದತ್ತ ಹೆಚ್ಚು ಆಸಕ್ತಿ ಮೂಡಿಸುವುದರಿಂದ ಮಾನಸಿಕವಾಗಿ ಸದೃಢರನ್ನಾಗಿ ಮಾಡಬಹುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ಗ್ರಾಮೀಣ ಯೋಗ ದಸರಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಂತ್ರಜ್ಞಾನ, ಆಧುನಿಕತೆ ಭರದಲ್ಲಿ ನಮ್ಮ ಜೀವನ ತುಂಬಾ ವೇಗವಾಗಿ ಹೋಗುತ್ತಿದೆ. ಇದರಿಂದ ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ಸಮಯ ಮೀಸಲಿಡುವಷ್ಟು ವ್ಯವಧಾನ ಕುಂಠಿತವಾಗುತ್ತಿದೆ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಯೋಗ ಅಡಿಪಾಯ. ಯೋಗದಲ್ಲಿ ತೊಡಗಿಸಿಕೊಳ್ಳುವುದರಿಂದ ಮಕ್ಕಳಲ್ಲಿ ಸಂಯಮ, ಸಹನೆಯಂತಹ ಸದ್ಗುಣಗಳನ್ನು ಬಿತ್ತಲು ನೆರವಾಗುತ್ತದೆ. ದೊಡ್ಡವರಾದ ನಾವುಗಳು ಕೂಡ ಇಂತಹ ಗುಣಗಳತ್ತ ಮುಖ ಮಾಡಲು ಯೋಗದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು. ಇಂತಹ ಮಹತ್ತರವಾದ ಯೋಗವನ್ನು ನಂಜನಗೂಡಿನಲ್ಲಿ ಪ್ರಕಾಶ್ ಜಿ.ಉಡಿಗಾಲ ಹಾಗೂ ಎನ್.ಆರ್.ಗಣೇಶ್ಮೂರ್ತಿ ಅಂತವರು ಉಚಿತವಾಗಿ ಪಸರಿಸುತ್ತಿರುವುದು ನಂಜನಗೂಡಿನ ಸೌಭಾಗ್ಯವಾಗಿದೆ. ಎಲ್ಲರೂ ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಗ್ರಾಮೀಣ ಜನರೂ ಯೋಗ ಬಗ್ಗೆ ಅರಿವು ಹೆಚ್ಚಿಸಿಕೊಳ್ಳಬೇಕೆಂದು ಆಯುಷ್ ಇಲಾಖೆ ಯೋಗ ಹಬ್ ಯೋಜನೆಯನ್ನು ದೇಶದಲ್ಲಿ ಮೊದಲ ಬಾರಿಗೆ ನಂಜನಗೂಡು ತಾಲೂಕನ್ನು ಆಯ್ಕೆ ಮಾಡಿಕೊಂಡಿರುವುದು ವೈಯಕ್ತಿಕವಾಗಿ ನನಗೆ ಖುಷಿಕೊಟ್ಟಿದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಯೋಗ ಕೇಂದ್ರಗಳು ನಿರಂತರವಾಗಿ ನಡೆಯಬೇಕು. ಇದಕ್ಕೆ ಪೂರಕವಾಗಿ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದರು.
ಯೋಗ ದಸರಾ ಉಪಸಮಿತಿಯ ಉಪ ವಿಶೇಷಾಧಿಕಾರಿ ರಮ್ಯಾ, ಕಾರ್ಯಾಧ್ಯಕ್ಷೆ ನಿರೂಪ ವೆಸ್ಲಿ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸಿ.ರೇಣುಕಾದೇವಿ, ಆಯುಷ್ ತಾಲೂಕು ಅಧಿಕಾರಿ ಡಾ.ಅಶೋಕ್ಕುಮರ್, ಸರ್ಕಾರೇತರ ಸಮಿತಿ ಅಧ್ಯಕ್ಷ ಕಾಂತರಾಜು, ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷ ಆರ್.ವಿ.ರೇವಣ್ಣ, ಡಾ.ರಾಘವೇಂದ್ರ, ಡಾ.ಕಲಾವತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿತ್ರ:1
ನಂಜನಗೂಡಿನಲ್ಲಿ ನಡೆದ ಗ್ರಾಮೀಣ ಯೋಗ ದಸರಾವನ್ನು ಶಾಸಕ ದರ್ಶನ್ ಧ್ರುವನಾರಾಯಣ ಉದ್ಘಾಟಿಸಿದರು.
ಚಿತ್ರ:3
ನಂಜನಗೂಡಿನಲ್ಲಿ ನಡೆದ ಗ್ರಾಮೀಣ ಯೋಗ ದಸರಾದಲ್ಲಿ ಯೋಗಬಂಧುಗಳ ನೃತ್ಯರೂಪಕ ಕಣ್ಮನ ಸೆಳೆಯಿತು.