
ಮೈಸೂರು; ಬೆಳಗಾವಿಯಲ್ಲಿ ಅ. 26 ರಂದು ಮುಖ್ಯಮಂತ್ರಿಗಳು ಕರೆದಿರುವ ಸಭೆ, ರೈತರ ಬಗ್ಗೆ ಕಣ್ಣೀರು ಸುರಿಸುವ ಸಭೆಯಾಗಬಾರದು ರೈತರ ಸಂಕಷ್ಟ ನಿವಾರಿಸುವ ಸಭೆಯಾಗಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಶುಕ್ರವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಕಬ್ಬು ಅಭಿವೃದ್ಧಿ ಆಯುಕ್ತರು, ಈ ಹಿಂದಿನ ವರ್ಷವೇ ಒಂದು ಟನ್ ಕಬ್ಬು ಉತ್ಪಾದನೆಗೆ 4450 ವೆಚ್ಚ ಬರುತ್ತದೆ ಎಂದು ಕೇಂದ್ರ ಕೃಷಿ ಬೆಲೆ ಆಯೋಗಕ್ಕೆ ವರದಿ ನೀಡಿದ್ದಾರೆ. ಅದರಂತೆ ಕಬ್ಬಿನ ಎಫ್ ಆರ್ ಪಿ ಬೆಲೆ ಏರಿಸಬೇಕು ಎಂದು ಮುಖ್ಯಮಂತ್ರಿಗಳು ಪ್ರಧಾನಿಗಳಿಗೆ ಪತ್ರ ಬರೆದಾಗ ಯಾಕೆ ಪ್ರಸ್ತಾಪ ಮಾಡಿಲ್ಲ. ಇದು ದುರದೃಷ್ಟಕರ ಎಂದರು.
ಕಬ್ಬಿನ ಬೀಜ, ಗೊಬ್ಬರ, ಕೃಷಿ ಕೂಲಿ, ನೀರಾವರಿ, ವಿದ್ಯುತ್, ಡೀಸೆಲ್, ಕಟಾವು ಮತ್ತು ಸಾಗಾಣಿಕೆ ಸೇರಿದಂತೆ ಎಲ್ಲ ಉತ್ಪಾದನಾ ವೆಚ್ಚಗಳು ಗಣನೀಯವಾಗಿ ಏರಿಕೆಯಾಗಿವೆ. ಈಗ ನಿಗದಿಯಾಗಿರುವ ಕಬ್ಬಿನ ದರವು ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿಲ್ಲ.
ಆದ್ದರಿಂದ ಕೇಂದ್ರ ಸರ್ಕಾರವು ಕನಿಷ್ಠ 10.25% ಸಕ್ಕರೆ ಇಳುವರಿ ಪ್ರಮಾಣಕ್ಕೆ ಕಬ್ಬಿನ ಎಫ್ಆರ್ಪಿ ದರವನ್ನು ಏರಿಸಬೇಕು .
ರಾಜ್ಯ ಸರ್ಕಾರ. ಉತ್ತರ ಪ್ರದೇಶ ಪಂಜಾಬ್ ಹರಿಯಾಣ ಹಾಗೂ ತಮಿಳುನಾಡು ಮಾದರಿಯಲ್ಲಿ ಕಬ್ಬಿಗೆ ಹೆಚ್ಚುವರಿ ಎಸ್ಎಪಿ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಕಬ್ಬಿನ ಉಪ ಉತ್ಪನ್ನಗಳಾದ ಮೊಲಾಸಿಸ್, ಬಗಾಸ್, ಎಥೆನಾಲ್, ವಿದ್ಯುತ್ ಉತ್ಪಾದನೆ ಹಾಗೂ ಇತರ ಉತ್ಪನ್ನಗಳಿಂದ ಸಕ್ಕರೆ ಕಾರ್ಖಾನೆಗಳಿಗೆ ಹೆಚ್ಚುವರಿ ಆದಾಯ ದೊರೆಯುತ್ತಿದೆ.
ಸಕ್ಕರೆ ನಿಯಂತ್ರಣ ಕಾನೂನು , 1966ರ ಅನ್ವಯ ಹಾಗೂ ಕಬ್ಬಿನ ಉಪ ಉತ್ಪನ್ನಗಳಿಂದ ದೊರೆಯುವ ಆದಾಯವನ್ನು ಪರಿಗಣಿಸಿ, ಹಾಗೂ ರಾಜ್ಯ ಸರ್ಕಾರಕ್ಕೆ ಸಕ್ಕರೆ ಉದ್ಯಮದಿಂದ ದೊರೆಯುವ ತೆರಿಗೆ ಆದಾಯವನ್ನೂ ಗಮನದಲ್ಲಿಟ್ಟುಕೊಂಡು, ರೈತರಿಗೆ ಹೆಚ್ಚುವರಿ ದರ ನೀಗದಿ ಮಾಡಲು ಕ್ರಮ ಕೈಗೊಳ್ಳಬೇಕು.
ತಮಿಳುನಾಡು ಮಾದರಿಯಲ್ಲಿ ಎಫ್ಆರ್ಪಿ ದರಕೆ ಕರ್ನಾಟಕ ಸರ್ಕಾರವು ಪ್ರತಿ ಟನ್ ಕಬ್ಬಿಗೆ ಹೆಚ್ಚುವರಿಯಾಗಿ ?800 ಎಸ್ಎಪಿ (SಂP) ದರವನ್ನು ನಿಗದಿಪಡಿಸಬೇಕು. ಇದರಿಂದ ಕಬ್ಬು ಬೆಳೆಗಾರರಿಗೆ ಆರ್ಥಿಕ ಭದ್ರತೆ ದೊರೆಯುತ್ತದೆ ಎಂದು ಹೇಳಿದರು.
ಕಬ್ಬು ಕಟಾವು ಯಂತ್ರದ ಕಬ್ಬು ಕಟಾವು ಮಾಡುವ ವೇಳೆ ವೇಸ್ಟೇಜ್ ಎಂದು ಶೇ.8ರಿಂದ 10ರಷ್ಟು ತೂಕ ಕಡಿತ ಮಾಡುವುದನ್ನು ನಿಲ್ಲಿಸಬೇಕು
ಕಬ್ಬು ಕಟಾವು ಯಂತ್ರಗಳ ಮೂಲಕ ಕಬ್ಬು ಕಟಾವು ಮಾಡಿದಾಗ ಕೆಲವು ಸಕ್ಕರೆ ಕಾರ್ಖಾನೆಗಳು ಶೇ.8ರಿಂದ 10ರಷ್ಟು ಕಬ್ಬಿನ ತೂಕವನ್ನು ‘ವೇಸ್ಟೇಜ್’ ಎಂದು ಕಡಿತ ಮಾಡುತ್ತಿರುವುದು ರೈತರಿಗೆ ಆರ್ಥಿಕ ನಷ್ಟ ಉಂಟುಮಾಡುತ್ತಿದೆ.
ವೈಜ್ಞಾನಿಕ ಪರೀಕ್ಷೆ ಹಾಗೂ ಕಾನೂನುಬದ್ಧ ಮಾನದಂಡಗಳಿಲ್ಲದೆ ಈ ರೀತಿ ತೂಕ ಕಡಿತ ಮಾಡುವುದು ರೈತರ ಶೋಷಣೆಯಾಗಿದೆ.
ಆದ್ದರಿಂದ ಯಂತ್ರದ ಮೂಲಕ ಕಟಾವು ಮಾಡಿದ ಕಬ್ಬಿನ ತೂಕದಲ್ಲಿ ಅನಧಿಕೃತವಾಗಿ ಶೇ.8ರಿಂದ 10ರಷ್ಟು ಕಡಿತ ಮಾಡುವ ಪದ್ಧತಿಯನ್ನು ತಕ್ಷಣ ನಿಷೇಧಿಸಬೇಕು.
ಅಕ್ರಮವಾಗಿ ತೂಕ ಕಡಿತ ಮಾಡುವ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಮುಖ ಒತ್ತಾಯಗಳನ್ನು 26 ರಂದು ಬೆಳಗಾವಿಯಲ್ಲಿ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಸಚಿವ ಸಂಪುಟ ಗಂಭೀರವಾಗಿ ಪರಿಗಣಿಸಿ, ಸಂಬAಧಪಟ್ಟ ಇಲಾಖೆಗಳ ಉನ್ನತ ಮಟ್ಟದ ಸಭೆ ನಡೆಸಿ, ಕಾಲಮಿತಿಯೊಳಗೆ ಸೂಕ್ತ ನಿರ್ಧಾರ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ್, ರಾಜ್ಯ ಸಂಚಾಲಕ ಬರಡನಪುರ ನಾಗರಾಜ್,
ಜಿಲ್ಲಾಧ್ಯಕ್ಷ ಪಿ ಸೋಮಶೇಖರ್, ಜಿಲ್ಲಾ ಕಾರ್ಯಾಧ್ಯಕ್ಷ ಕಿರಗಸೂರು ಶಂಕರ್ ಇದ್ದರು.