Skip to main content

3Kaala News

ಸುಭಾಷಿತ 

ಪಕ್ಕದಲ್ಲಿರುವವನ ತಟ್ಟೆಯಲ್ಲಿ ಏನಿದೆ ಅಂತ ಯಾವತ್ತೂ ಇಣುಕಿ ನೋಡಬೇಡ. ಕಾರಣ ಅಲ್ಲಿ ಜಾಸ್ತಿಯಿದ್ದರೆ, ನಿನಗೆ ಸಂಕಟವಾಗುತ್ತದೆ.ಅಲ್ಲಿ ಕಡಿಮೆ ಇದ್ದರೆ, ನಿನಗೆ ಅಹಂಕಾರ ಬರುತ್ತದೆ.ಎರಡೂ ಒಳ್ಳೆಯದಲ್ಲ.ನಮ್ಮ ತಟ್ಟೆಯನ್ನು ನಾವು ನೋಡಿಕೊಂಡಿದ್ದರೆ, ಸಿಗುವ ಸಂತೋಷವೇ ಬೇರೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ತಂಬಾಕು ಮಾರುಕಟ್ಟೆ ಆರಂಭ – ಉತ್ತಮ ದರ ನಿರೀಕ್ಷೆಯಲ್ಲಿದ್ದ ಬೆಳೆಗಾರರಿಗೆ ನಿರಾಶೆ 

ರಾಜ್ಯ ಸರ್ಕಾರ ಪ್ರೋತ್ಸಾಹ ಧನ ನೀಡಬೇಕು- ಸರ್ಕಾರಕ್ಕೆ ಬಿ.ವಿ ಬಸವರಾಜು ಒತ್ತಾಯ 

ಎಚ್.ಡಿ.ಕೋಟೆ: ತಾಲ್ಲೂಕಿನಲ್ಲಿ ಈ ಬಾರಿ ಬರ ಪರಿಸ್ಥಿತಿ ತೀವ್ರವಾಗಿದ್ದು, ತಂಬಾಕು ಬೆಳೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರದಿಂದ ತಂಬಾಕು ಬೆಳೆಗಾರರಿಗೆ ಉಂಟಾಗಿರುವ ನಷ್ಟವನ್ನು ಪರಿಗಣಿಸಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಲಾಗುವುದು ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಹೆಬ್ಬಾಳ ಸಮೀಪವಿರುವ  ತಂಬಾಕು ಹರಾಜು ಮಾರುಕಟ್ಟೆ ಸಂಖ್ಯೆ 1 ಮತ್ತು 65ರಲ್ಲಿ ಶುಕ್ರವಾರ ತಂಬಾಕು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿ  ಮಾತನಾಡಿದರು. ತಾಲ್ಲೂಕಿನಲ್ಲಿ ಈ ಬಾರಿ ಬರ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಮಳೆ ಕೊರತೆಯಿಂದ ಬೆಳೆಗಳ ಬೆಳವಣಿಗೆ ಕುಂಠಿತಗೊಂಡಿದ್ದು, ತಂಬಾಕು ಬೆಳೆಗಾರರು ನಿರೀಕ್ಷಿಸಿದಷ್ಟು ಇಳುವರಿ ಪಡೆಯಲು ಸಾಧ್ಯವಾಗಿಲ್ಲ. ಈಗಾಗಲೇ ಕೃಷಿ ವೆಚ್ಚ ಹೆಚ್ಚಾಗಿದ್ದು, ಇಳುವರಿ ಕಡಿಮೆಯಾಗಿರುವುದರಿಂದ ರೈತರು ನಷ್ಟ ಅನುಭವಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರಗಳು ರೈತರ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ಒದಗಿಸಬೇಕು ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಬಿ.ವಿ ಬಸವರಾಜು ಮಾತನಾಡಿ, ನಮ್ಮ ತಾಲೂಕಿನಲ್ಲಿ ಅಂದಾಜು 9-10 ಮಿಲಿಯನ್ ಕೆಜಿ ಹೊಗೆಸೊಪ್ಪು ಬೆಳೆಯಲಾಗುತ್ತಿದ್ದು, ಕನಿಷ್ಠ 4500 ಅಧಿಕೃತ,1500 ಅನಧಿಕೃತ ಬೆಳೆಗಾರರು ಇದ್ದಾರೆ. ಒಂದು ಕೆಜಿ ಹೊಗೆಸೊಪ್ಪು ಬೆಳೆಯಲು ರೈತ ಕನಿಷ್ಠ 230-240 ರೂಪಾಯಿ ವೆಚ್ಚ ಮಾಡಬೇಕು. ಆದರೆ ಈ ವರ್ಷದ ಮಾರುಕಟ್ಟೆಯಲ್ಲಿ ಒಂದು ಕೆಜಿ  ಹೊಗೆಸೊಪ್ಪಿಗೆ 270 ರೂಪಾಯಿ ನಿಗದಿಪಡಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 50 ರೂಪಾಯಿ ಕಡಿಮೆಯಾಗಿದೆ. ವರ್ಷದಿಂದ ವರ್ಷಕ್ಕೆ ಈ ರೀತಿ ದರ ಕುಸಿಯುತ್ತಿರುವುದರಿಂದ  ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.  ದರ ಕುಸಿತ ಸಂದರ್ಭದಲ್ಲಿ ಆಂಧ್ರಪ್ರದೇಶದಂತೆ ರಾಜ್ಯ ಸರ್ಕಾರಗಳು ಮಧ್ಯಪ್ರವೇಶಿಸಿ ಪ್ರೋತ್ಸಾಹ ಧನ ನೀಡಬೇಕು. ಒಂದು ವಾರದ ಬಳಿಕವೂ ದರ ಹೆಚ್ಚಳ ಮಾಡದಿದ್ದರೆ ರಾಜ್ಯಾದ್ಯಂತ ತಂಬಾಕು ಮಾರುಕಟ್ಟೆ ಬಂದ್ ಮಾಡಬೇಕಾಗುತ್ತೆ ಎಂದು ಬಿ.ವಿ. ಬಸವರಾಜು ಎಚ್ಚರಿಕೆ ನೀಡಿದರು. 

ತಂಬಾಕು ಹರಾಜು ಮಂಡಳಿ ಅಧೀಕ್ಷಕ ಶಾಮ್ ಮಾತನಾಡಿ, ಉತ್ಪಾದನೆ ಹೆಚ್ಚಾಗಿ, ಬೇಡಿಕೆ ಕಡಿಮೆಯಾದಾಗ ದರ ಕುಸಿಯುತ್ತ ಹೋಗುತ್ತದೆ. ಕಳೆದ ಬಾರಿಯೂ ಸಹ ಉತ್ಪಾದನೆ ಹೆಚ್ಚಾಗಿ ದರ ಕುಸಿದಿತ್ತು. ಈ ಬಾರಿ ದರ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಹೇಳಿದರು. 

ಈ ಸಂದರ್ಭದಲ್ಲಿ ಮೊತ್ತ ಬಸವರಾಜಪ್ಪ, ಪರಶಿವಮೂರ್ತಿ, ವೆಂಕಟೇಗೌಡ, ಮಹೇಶ್, ಆನಂದ, ಗಂಗಾಧರ್, ಸಿದ್ದರಾಮು, ಏಜಾಜ್ ಪಾಷ, ಗುರುಸ್ವಾಮಿ, ಸಿದ್ದರಾಜು, ಮಹದೇವು, ಕೆಂಡಗಣ್ಣಸ್ವಾಮಿ, ಎ.ಜೆ. ಕಾಳೇಗೌಡ, ಮಹದೇವಸ್ವಾಮಿ, ಪೃಥ್ವಿ, ರಾಜೇಗೌಡ, ಹರಿದಾಸ್, ಬಾಲರಾಜು  ಮೇಟಿಕುಪ್ಪೆ ಚಂದ್ರಶೇಖರ್ ಸೇರಿದಂತೆ ತಂಬಾಕು ಬೆಳೆಗಾರರು ಉಪಸ್ಥಿತರಿದ್ದರು.