
ಪಿರಿಯಾಪಟ್ಟಣ :ಮಾದಕ ವಸ್ತುಗಳ ವ್ಯಸನವು ಸಮಾಜದ ಒಂದು ದೊಡ್ಡ ಪಿಡುಗಾಗಿದೆ ಎಂದು ಬೆಟ್ಟದಪುರ ಪೊಲೀಸ್ ಠಾಣೆಯ ಎಎಸ್ಐ ಮಂಜುನಾಥ್ ತಿಳಿಸಿದರು.
ತಾಲೂಕಿನ ಬೆಟ್ಟದಪುರ ಎಸ್ ಎಂ ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಬೆಟ್ಟದಪುರ ಪೊಲೀಸ್ ಠಾಣೆ ಇವರ ಸಂಯುಕ್ತ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಒಮ್ಮೆ ಮಾದಕ ವಸ್ತುಗಳ ಬಳಕೆ ಮಾಡುವುದಕ್ಕೆ ಹೋದರೆ ಮುಂದಿನ ದಿನಗಳಲ್ಲಿ ಮಾದಕ ವ್ಯಸನಿಗಳಾಗುವುದು ಖಂಡಿತ ಹಾಗಾಗಿ ಇಂದಿನ ವಿದ್ಯಾರ್ಥಿ ಹಾಗೂ ಯುವ ಸಮೂಹ ವ್ಯಸನ ಮತ್ತು ದುಶ್ಚಟಗಳಿಗೆ ಬಲಿಯಾಗದೆ ಸ್ವಾಸ್ಥ ಭಾರತ ನಿರ್ಮಾಣ ಮಾಡುವಲ್ಲಿ ಸಂಕಲ್ಪ ತೊಡಬೇಕು.
ಕೆಟ್ಟ ಚಟಗಳಿಗೆ ಬಲಿಯಾದವರು ಮಾನಸಿಕ ಅಸ್ವಸ್ಥತೆ ದೈಹಿಕ ಬಲಹೀನತೆ ಅನುಭವಿಸಿದರ ಜೊತೆಗೆ ಅತ್ಯಾಚಾರ, ಕೊಲೆ, ದರೋಡೆ ಮೊದಲಾದ ಕೃತ್ಯಗಳಲ್ಲಿ ತೊಡಗುತ್ತಿರುವುದು ಅತ್ಯಂತ ಆಘಾತಕಾರಿಯಾಗಿದೆ
ಪೊಲೀಸ್ ವ್ಯವಸ್ಥೆಯ ಜೊತೆಗೆ ಸಾರ್ವಜನಿಕರ ಸಹಕಾರದಿಂದ ಮಾತ್ರ ಇದರ ನಿರ್ಮೂಲನೆ ಸಾಧ್ಯ ಎಂದು ಹೇಳಿದರು.
ಎಸ್ ಎಂ ಎಸ್ ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷರಾದ ಬಿ ವಿ ಮಂಜುನಾಥ್ ಮಾತನಾಡಿ ಮಾದಕ ವಸ್ತುಗಳ ವ್ಯಸನದ ಹರಡುವಿಕೆಯು ದೇಶದ ಯುವಶಕ್ತಿಯ ಗುಣಮಟ್ಟವನ್ನು ಕುಂಠಿತಗೊಳಿಸುತ್ತಿದ್ದು, ಇಂತಹ ಜಾಗೃತಿ ಕಾರ್ಯಕ್ರಮಗಳ ಮೂಲಕ ಯುವಜನತೆಯಲ್ಲಿ ಅರಿವು ಮೂಡಿಸುವುದು ಶಿಕ್ಷಣ ವ್ಯವಸ್ಥೆಯ ಅತ್ಯಂತ ಪ್ರಮುಖವಾದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಎಂ ಎಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎ ವಿ ಛಾಯಾ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ತಾಲೂಕು ಯೋಜನಾಧಿಕಾರಿಗಳಾದ ಶೇಖರ ಗೌಡ, ಪದಾಧಿಕಾರಿಗಳಾದ ಸುನೀತ ಶೆಟ್ಟಿ, ರೂಪ, ರೈತ ಮುಖಂಡ ದೇವರಾಜ್, ಪ್ರಾಂಶುಪಾಲರಾದ ರಾಜ ಎಸ್ ಕೆ, ಮುಖ್ಯ ಶಿಕ್ಷಕರಾದ ವೆಂಕಟೇಶ್, ಕುಮಾರ್, ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮಾಧಿಕಾರಿಗಳಾದ ಯಶವಂತ ಕುಮಾರ್, ಸಹ ಕಾರ್ಯಕ್ರಮಾಧಿಕಾರಿಗಳಾದ ಕುಬೇರ್, ಸತೀಶ್, ಉಪನ್ಯಾಸಕರಾದ ಶಿವಕುಮಾರ್, ವಸಂತ್, ಸುನಿಲ್, ಬಸವರಾಜು, ಹರ್ಷಿತ, ಪ್ರತಾಪ್, ಅಕ್ಷತಾ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.