
ನಂಜನಗೂಡು: ಮೈಸೂರು ಜಿಲ್ಲೆಯು ಈಗಾಗಲೇ ವಿಶ್ವದಾದ್ಯಂತ ಯೋಗದ ತವರೂರಾಗಿ ಗುರುತಿಸಿಕೊಂಡಿದೆ. ಈ ಪ್ರಾಯೋಗಿಕ ಅಧ್ಯಯನಕ್ಕಾಗಿ ನಂಜನಗೂಡು ತಾಲ್ಲೂಕನ್ನು ಆಯ್ಕೆ ಮಾಡಿರುವುದು ಇಡೀ ಜಿಲ್ಲೆಗೆ ಹೆಮ್ಮೆಯ ವಿಷಯ ಎಂದು ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಹೇಳಿದರು.
ರಾಷ್ಟ್ರೀಯ ಆಯುಷ್ ಮಿಷನ್ ಯೋಜನೆಯಡಿ ಮೈಸೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳ್ಳಲಿರುವ ಮಹತ್ವಾಕಾಂಕ್ಷಿ ಯೋಗ ಹಬ್ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ನಂಜನಗೂಡು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಗದ ಪ್ರಯೋಜನಗಳನ್ನು ತಾಲ್ಲೂಕಿನ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು
ಜುಲೈ 19 ರಂದು ಬೆಳಿಗ್ಗೆ 6 ರಿಂದ 8 ಗಂಟೆಯವರೆಗೆ ನಂಜನಗೂಡು ನಗರದ ಪ್ರಸಿದ್ಧ ಶ್ರೀಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ಯೋಗ ಹಬ್ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ ಆಗಮಿಸುವ ಸಾಧ್ಯತೆ ಇರುವುದರಿಂದ, ಎಲ್ಲಾ ಇಲಾಖೆಗಳು ಜವಾಬ್ದಾರಿಯುತವಾಗಿ ಸಕಲ ಪೂರ್ವಸಿದ್ದತೆಗಳನ್ನು ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾದೇವಿ ಸಿ. ಮಾತನಾಡಿ, ಯೋಜನೆಯ ರೂಪುರೇಷೆಗಳ ಕುರಿತು ಮಾಹಿತಿ ನೀಡಿ, ನಂಜನಗೂಡು ತಾಲ್ಲೂಕಿನ 45 ಗ್ರಾಮ ಪಂಚಾಯಿತಿಗಳಲ್ಲಿ ಮೂರು ತಿಂಗಳ ಅವಧಿಗೆ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.
ಪ್ರತಿ ಗ್ರಾಮ ಪಂಚಾಯಿತಿಗೆ ಇಬ್ಬರು ಯೋಗ ತರಬೇತುದಾರರನ್ನು ನಿಯೋಜಿಸಲಾಗುವುದು ಹಾಗೂ ಇವರಿಗೆ ಪ್ರತಿ ತಿಂಗಳು ರೂ. 8,000 ಗೌರವಧನ ನೀಡಲಾಗುವುದು. ಕಾರ್ಯಕ್ರಮದ ಉಸ್ತುವಾರಿಗಾಗಿ 10 ಮಂದಿ ಮೇಲ್ವಿಚಾರಕರನ್ನು ನೇಮಿಸಲಾಗುವುದು. ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ವೈದ್ಯಾಧಿಕಾರಿಗಳು ಮೇಲ್ವಿಚಾರಕರಾಗಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮಾಹಿತಿ, ಶಿಕ್ಷಣ ಮತ್ತು ಸಂವಹನ ಚಟುವಟಿಕೆಗಳನ್ನು ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಗ್ರಾಮ ಮಟ್ಟದಲ್ಲಿ ಸಾರ್ವಜನಿಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆಯಲಾಗುವುದು ಮತ್ತು ಅವರಿಗೆ ನಿಯಮಾನುಸಾರ ಗೌರವಧನ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಮಹಾವಿದ್ಯಾಲಯದ ಪ್ರಾಂಶುಪಾ ಡಾ. ವೆಂಕಟಕೃಷ್ಣ ಮಾತನಾಡಿ, ರಾಜಮನೆತನದ ಕಾಲದಿಂದಲೂ ಮೈಸೂರಿಗೆ ಯೋಗದ ಸಮೃದ್ಧ ಪರಂಪರೆ ಇದೆ. ಅಧಿಕಾರಿಗಳು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿ ಇದನ್ನು ಯಶಸ್ವಿಗೊಳಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಮಾತನಾಡಿ, ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೂ ಗ್ರಾಮ ಮಟ್ಟದಲ್ಲಿ ಜನಜಾಗೃತಿ ಮೂಡಿಸಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು ಆಯುಷ್ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.