
ಪಿರಿಯಾಪಟ್ಟಣ: ಕಾರ್ಗಿಲ್ ವಿಜಯ ದಿವಸ್ ದೇಶ ಪ್ರೇಮ ಸಾರುವ ದೇಶದ ಹೆಮ್ಮೆಯ ಸಂಕೇತದ ದಿನವಾಗಿದೆ ಎಂದು ಮಾಜಿ ಸೈನಿಕರ ಸಂಘದ ಅಧ್ಯಕ್ಷ ನರಸೇಗೌಡ ತಿಳಿಸಿದರು.
ಪಟ್ಟಣದ ಜಿಜೆಸಿಪಿ ಶಾಲಾ ಆವರಣದಲ್ಲಿ
ಪಿರಿಯಾಪಟ್ಟಣ ತಾಲ್ಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುಬೇದಾರ್ ಕೆ ಪಿ ಬೆಳ್ಳಿಯಪ್ಪ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು ನಮ್ಮ ದೇಶದ ಸೈನಿಕರು ಪಾಕಿಸ್ತಾನದ ವಿರುದ್ಧ ಶೌರ್ಯವನ್ನು ಮೆರೆದ ಈ ದಿನ ಮುಂದಿನ ಪೀಳಿಗೆಗೆ ಪ್ರೇರಣೆಯ ದಿನವಾಗಿದೆ ನಮ್ಮ ದೇಶದ ಸೈನಿಕರು ಮಳೆ, ಗಾಳಿ, ಬಿಸಿಲು, ಚಳಿ ಎನ್ನದೆ ಹಗಲಿರುಳು ದೇಶಕ್ಕಾಗಿ ದುಡಿಯುತ್ತಿದ್ದಾರೆ
ಕಾರ್ಗಿಲ್ ಯುದ್ಧದಲ್ಲಿ 527ಕ್ಕೂ ಹೆಚ್ಚು ಯೋಧರು ಹುತಾತ್ಮರಾದರು ಒಂದು ಸಾವಿರಕ್ಕೂ ಹೆಚ್ಚು ಸೈನಿಕರು ಶಾಶ್ವತ ಅಂಗವೈಕಲ್ಯರಾಗಿದ್ದು ಅವರ ತ್ಯಾಗ ಬಲಿದಾನ ಸ್ಮರಿಸುತ್ತಾ ಇಂದಿನ ಯುವ ಪೀಳಿಗೆಗೆ ತಲುಪಿಸಲು ಜುಲೈ 26 ರನ್ನು ಕಾರ್ಗಿಲ್ ವಿಜಯ ದಿವಸ್ ಎಂದು ಆಚರಿಸುತ್ತೇವೆ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಮ್ಮ ಸೈನಿಕರು ನಡೆಸಿದ ಹೋರಾಟ ರೋಚಕವಾದುದು.
ಈ ವಿಜಯೋತ್ಸವ ದೇಶದ ಪ್ರತಿಯೊಬ್ಬ ಭಾರತೀಯನಿಗೂ, ಭಾರತೀಯ ಯೋಧರಿಗೂ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳಿದರು.
ನಿವೃತ್ತ ಸೈನಿಕ ಸಂಘದ ಗೌರವಾಧ್ಯಕ್ಷ ವಿಕ್ರಂ ರಾಜ್, ಮಾತನಾಡಿ ದೇಶದ ರಕ್ಷಣೆಯಲ್ಲಿ ಸೈನಿಕರ ಪಾತ್ರ ಅಪಾರವಾದದ್ದು ಅವರು ದೇಶದ ರಕ್ಷಣೆಗಾಗಿ ತಮ್ಮ ಪ್ರಾಣವನ್ನೇ ಮೂಡುಪಾಗಿಟ್ಟಿದ್ದಾರೆ
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಹುತಾತ್ಮರಾದ ಮನೋಜ್ ಕುಮಾರ್ ಪಾಂಡೆ, ಸೌರಭ್ ಕಾಲಿಯ, ಮುಂತಾದವರ ಜೀವನ ಚರಿತ್ರೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಅವರ ದೇಶ ಪ್ರೇಮವನ್ನು ಯುವ ಸಮೂಹ ಮೈಗೂಡಿಸಿಕೊಂಡು ಸೈನ್ಯಕ್ಕೆ ಸೇರಿ ದೇಶ ಸೇವೆ ಮಾಡಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ರಂಜೀತ್, ಧ್ರುವ ಕುಮಾರ್, ಸುಬೇದಾರ್ ಭೋಜಪ್ಪ, ಬಸಲಾಪುರ ಮಣಿ, ಆರ್.ಸ್ವಾಮಿ, ಜವರೇಗೌಡ, ಕೆ ಪಿ ಗಣೇಶ್, ಪ್ರವೀಣ್ ಸೇರಿದಂತೆ ಇತರರು ಇದ್ದರು