
ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರತಿಯೊಂದು ಕಲಿಕಾರ್ಥಿ ಸಹಾಯ ಕೇಂದ್ರವು ಯುಜಿಸಿಯ 2020 ರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ, ಪಾರದರ್ಶಕ ಮತ್ತು ಜವಾಬ್ದಾರಿಯುತ ಸೇವೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಎ.ಪಿ ಜ್ಞಾನಪ್ರಕಾಶ್ ಅವರು ಹೇಳಿದರು.
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2026–27ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯ ಪ್ರವೇಶಾತಿ ಅಭಿಯಾನವನ್ನು ಅನುಷ್ಠಾನಗೊಳಿಸುವ ಹಾಗೂ ಕಲಿಕಾರ್ಥಿ ಸಹಾಯ ಕೇಂದ್ರಗಳ ಕಾರ್ಯನಿರ್ವಹಣೆಯನ್ನು ಯುಜಿಸಿ ನಿಯಮಾವಳಿಗೆ ಅನುಗುಣವಾಗಿ ಬಲಪಡಿಸುವ ಉದ್ದೇಶದಿಂದ, ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಮಾರ್ಗದರ್ಶನ ಹಾಗೂ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಲಿಕಾರ್ಥಿ ಸಹಾಯ ಕೇಂದ್ರಗಳ ಕೇವಲ ಪ್ರವೇಶಾತಿ ಕೇಂದ್ರಗಳಾಗಿರದೆ, ಶಿಕ್ಷಣವನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿಸುವ ಪ್ರಮುಖ ಕೊಂಡಿಯಾಗಿ ಕಾರ್ಯನಿರ್ವಹಿಸಬೇಕು . ಕಲಿಕಾರ್ಥಿ ಸಹಾಯ ಕೇಂದ್ರಗಳ ಕಾರ್ಯದರ್ಶಿಗಳು, ಪ್ರಾದೇಶಿಕ ನಿರ್ದೇಶಕರು ಹಾಗೂ ವಿವಿಧ ವಿಭಾಗಗಳ ಅಧಿಕಾರಿಗಳು ತಮ್ಮ ಅನುಭವ, ಸಮಸ್ಯೆ ಮತ್ತು ಸಲಹೆಗಳನ್ನು ಮುಕ್ತವಾಗಿ ಮಂಡಿಸಲು ಅವಕಾಶ ಕಲ್ಪಿಸಲಾಯಿತು. ಅಧಿಕಾರಿಗಳು ಮಂಡಿಸಿದ ವಿಷಯಗಳನ್ನು ಆಲಿಸಿದ ಆಡಳಿತ ಮಂಡಳಿಯು, ಆಡಳಿತಾತ್ಮಕ ಹಾಗೂ ಶೈಕ್ಷಣಿಕ ದೃಷ್ಟಿಯಿಂದ ಅಗತ್ಯ ಕಾರ್ಯೋಚಿತ ಪರಿಹಾರಗಳನ್ನು ನೀಡಲಾಯಿತು.
ಅಧ್ಯಯನ ಕೇಂದ್ರಗಳ ಡೀನ್ ಡಾ. ಆನಂದಗೌಡ ಮಾತನಾಡಿ, ಪ್ರವೇಶಾತಿ ಅಭಿಯಾನದಲ್ಲಿ ಎಲ್ಲ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪರೀಕ್ಷಾಂಗ ಕುಲಸಚಿವ ಪ್ರೊ. ಆನಂದ್ಕುಮಾರ್ ಸಿ. ಎಸ್., ಶೈಕ್ಷಣಿಕ ವಿಭಾಗದ ಡೀನ್ ಪ್ರೊ. ರಾಮನಾಥಂ ನಾಯ್ಡು ಹಾಗೂ ಹಣಕಾಸು ಅಧಿಕಾರಿ ಪ್ರೊ. ನಿರಂಜನ್ ರಾಜ್ ಉಪಸ್ಥಿತರಿದದ್ದರು.