
*ವಿಜಯ ವಿಠಲ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಸಾಧಕರೊಂದಿಗೆ ಸಂವಾದ
ಮೈಸೂರು; ನಗರದ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳೊಂದಿಗೆ ಸಂವಾದ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕಾಲೇಜಿನ ಪ್ರಾಂಶುಪಾಲ ಹೆಚ್. ಸತ್ಯಪ್ರಸಾದ್ ಮಾತನಾಡಿ, ಯಶಸ್ಸು ಎನ್ನುವುದು ಒಂದು ದಿನದಲ್ಲಿ ದೊರೆಯುವ ಸಾಧನೆಯಲ್ಲ. ಸ್ಪಷ್ಟ ಗುರಿ, ನಿರಂತರ ಪರಿಶ್ರಮ, ಶಿಸ್ತು, ಸಮಯದ ಸದ್ಬಳಕೆ ಮತ್ತು ಆತ್ಮವಿಶ್ವಾಸದಿಂದ ಶೈಕ್ಷಣಿಕ ಜೀವನದಲ್ಲಿ ಸಾಧನೆ ಸಾಧ್ಯ ಎಂದು ಹೇಳಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟವಾಗಿದ್ದು ಬೋರ್ಡ್ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಯಲ್ಲಿ ಸರಿಯಾದ ಮಾರ್ಗದರ್ಶನ ಬಹಳ ಮುಖ್ಯ. ಈ ಉದ್ದೇಶದಿಂದಲೇ ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದು ವಿದ್ಯಾರ್ಥಿಗಳು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಸಾಧಕರಿಂದ ಅವರ ಅಧ್ಯಯನ ವಿಧಾನ, ಸಮಯ ನಿರ್ವಹಣೆ, ಪರೀಕ್ಷಾ ತಯಾರಿ ಹಾಗೂ ಯಶಸ್ಸಿನ ರಹಸ್ಯಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ವಿದ್ಯಾರ್ಥಿಗಳಿಗೆ ದೊರತಿದೆ. ಪ್ರತಿ ವಿದ್ಯಾರ್ಥಿಯಲ್ಲಿಯೂ ಅಪಾರ ಸಾಮರ್ಥ್ಯ ಅಡಗಿದ್ದು ತಮ್ಮ ಗುರಿಯನ್ನು ಸ್ಪಷ್ಟವಾಗಿ ನಿರ್ಧರಿಸಿ, ನಿರಂತರವಾಗಿ ಪ್ರಯತ್ನಿಸಿದರೆ ಯಶಸ್ಸು ಖಂಡಿತ ನಿಮ್ಮದಾಗುತ್ತದೆ ಎಂದರು.
ಕಠಿಣ ಪರಿಶ್ರಮಕ್ಕೆ ಯಾವುದೇ ಪರ್ಯಾಯವಿಲ್ಲ. ಏಕಾಗ್ರತೆ, ಸಮಯದ ನಿರ್ವಹಣೆ, ದೇವತಾನುಗ್ರಹ , ತಂದೆ-ತಾಯಿ ಹಾಗೂ ಗುರುಹಿರಿಯರಲ್ಲಿ ಗೌರವದ ಮನೋಭಾವ ವಿದ್ಯಾರ್ಥಿಗಳಲ್ಲಿ ಅತ್ಯವಶ್ಯಕ. ವಿದ್ಯಾರ್ಥಿಗಳು ಉತ್ತಮ ಸಂಸ್ಕಾರ, ಸಂಸ್ಕೃತಿ, ಶಿಸ್ತು ಮತ್ತು ಶ್ರದ್ಧೆ ಎಂಬ ಬುನಾದಿಯ ಮೇಲೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು. ಸರಿಯಾದ ಯೋಚನೆ, ಯೋಜನೆ ಮತ್ತು ವೇಳಾಪಟ್ಟಿಯನ್ನು ತಯಾರಿಸಿ, ಅದನ್ನು ಕಾರ್ಯರೂಪಕ್ಕೆ ತರಬೇಕು. ನಿಗದಿತ ಪಠ್ಯಪುಸ್ತಕ ಮತ್ತು ಪರಾಮರ್ಶನ ಪುಸ್ತಕಗಳನ್ನು ಓದಿ ಪರೀಕ್ಷೆಗೆ ಸಿದ್ಧತೆ ನಡೆಸಬೇಕು ಎಂದು ಸಲಹೆ ನೀಡಿದರು.
ಸಾಧಕ ವಿದ್ಯಾರ್ಥಿಗಳಾದ ಸಾರಿಕಾ ಕೆ. ಭಾರದ್ವಾಜ್, ಸುದೀಪ್ತಾ ಬಿ.ಎಸ್, ಅದ್ವೆöÊತ್ ಕೆ.ವಿ, ಜನೆಟ್ ಮರಿಯಾ, ಸುರಭಿ ಎಸ್. ಭಟ್, ಆದಿತ್ಯ ಎಸ್. ಉಮಾದಿ, ರೀತು ಎಂ.ಎಸ್ ಸಂವಾದದಲ್ಲಿ ಭಾಗವಹಿಸಿದರು.
ವಿದ್ಯಾರ್ಥಿಗಳು ಅಧ್ಯಯನ ವಿಧಾನ, ವೇಳಾಪಟ್ಟಿ ತಯಾರಿ, ಪರೀಕ್ಷೆಗಳ ಸಿದ್ಧತೆ, ಒತ್ತಡ ನಿರ್ವಹಣೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಸಾಧಕ ವಿದ್ಯಾರ್ಥಿಗಳು ತಮ್ಮ ಅನುಭವದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು. ಪ್ರಶ್ನೋತ್ತರ ಅಧಿವೇಶನದಲ್ಲಿ ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಭಾಗವಹಿಸಿ ತಮ್ಮ ಸಂದೇಹಗಳನ್ನು ಪರಿಹರಿಸಿಕೊಂಡರು. ಶಿಸ್ತು, ಪರಿಶ್ರಮ, ಸಮಯದ ಸದ್ಬಳಕೆ ಹಾಗೂ ಆತ್ಮವಿಶ್ವಾಸವೇ ಯಶಸ್ಸಿನ ಮೂಲಮಂತ್ರ ಎಂದು ಸಾಧಕ ವಿದ್ಯಾರ್ಥಿಗಳು ತಿಳಿಸಿದರು.