3Kaala News

ಸುಭಾಷಿತ 

ಓಟದ ಬದುಕಿನಲ್ಲಿ ಎಲ್ಲವನ್ನು ತಕ್ಷಣವೇ ಪಡೆದುಕೊಳ್ಳಬೇಕೆಂಬ ನಿನ್ನ ಹಟವೇ ನಿನ್ನ ನೆಮ್ಮದಿಯನ್ನು ಕದಿಯುತ್ತದೆ. ಸಮಯಕ್ಕಿಂತ ಮುಂಚೆ, ಹಣೆ ಬರಕಿಂತ ಮುಂಚೆ, ಹೆಚ್ಚಿಗೆ ಯಾರಿಗೂ ಏನೂ ಸಿಗುವುದಿಲ್ಲ . ನಿನ್ನ ಪ್ರಯತ್ನ ನಿರಂತರವಾಗಿರಲಿ. ಆದರೆ, ಫಲಿತಾಂಶಕ್ಕಾಗಿ ಇಂದಿನ ಶಾಂತಿಯನ್ನು ಬಲಿ ಕೊಡಬೇಡ. ಭಗವಾನ್ ಶ್ರೀ ಕೃಷ್ಣ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ಮೌನ ಹಾಗೂ ನಿರಂತರ ಪ್ರಯತ್ನವೇ ನಿಜವಾದ ಯೋಗ: ದತ್ತ ಪೀಠದ ಕಿರಿಯಶ್ರೀ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ


ಮೈಸೂರು:
ಯೋಗದ ಮೊದಲನೇ ಲಕ್ಷಣವೇ ನಿಶ್ಯಬ್ದ ಮತ್ತು ಮೌನ. ಯಾವುದೇ ಕೆಲಸವನ್ನು ಆಯಾ ಕಾರ್ಯಕ್ಕೆ ತಕ್ಕಂತೆ ಶ್ರದ್ಧೆಯಿಂದ ಮಾಡುವುದೇ ನಿಜವಾದ ಯೋಗ ಎಂದು ಮೈಸೂರಿನ ಅವಧೂತ ದತ್ತ ಪೀಠದ ಕಿರಿಯ ಪೀಠಾಧಿಪತಿಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೇಳಿದರು.
ವಿಶ್ವ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ಮೈಸೂರಿನ ಅವಧೂತ ದತ್ತ ಪೀಠದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಯೋಗಾಭ್ಯಾಸ ಹಾಗೂ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ಹಾಗೂ ಆದೇಶದಂತೆ ಆಶ್ರಮದಲ್ಲಿ ಕಳೆದ 50 ವರ್ಷಗಳಿಂದ ‘ದತ್ತ ಕ್ರಿಯಾ ಯೋಗ’ವನ್ನು ಕಲಿಸಿಕೊಡಲಾಗುತ್ತಿದ್ದು, ಸಾಧಕ ಬೋಧಕರು ಇದರ ಯಶಸ್ವಿ ಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು.
ಈ ವರ್ಷದ ಧ್ಯೇಯ: ‘ಯೋಗ ಫಾರ್ ಹೆಲ್ದೀ ಏಜಿಂಗ್’;
ಈ ವರ್ಷದ ಯೋಗ ದಿನಾಚರಣೆಯು ‘ಯೋಗ ಫಾರ್ ಹೆಲ್ದೀ ಏಜಿಂಗ್’ (ಆರೋಗ್ಯಕರ ವಯಸ್ಸಾಗುವಿಕೆಗಾಗಿ ಯೋಗ) ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವುದು ಅತ್ಯಂತ ಮುಖ್ಯವಾಗಿದೆ. ಯಾರೂ ಕಾಲವನ್ನು ತಡೆಯಲು ಸಾಧ್ಯವಿಲ್ಲ, ಆದರೆ ಕಾಲದಿಂದ ನಮ್ಮಲ್ಲಿ ಆಗುವ ಬದಲಾವಣೆಗಳನ್ನು ಯೋಗದ ಮೂಲಕ ಧನಾತ್ಮಕವಾಗಿ ರೂಪಿಸಿಕೊಳ್ಳಬಹುದು. ಕಾಲದ ಪ್ರಭಾವವು ನಮ್ಮ ಮೇಲೆ ಸರಿಯಾದ ರೀತಿಯಲ್ಲಿ ಬೀರುವಂತೆ ಮಾಡಲು ಯೋಗ ಸಹಕಾರಿಯಾಗಿದೆ ಎಂದು ವಿವರಿಸಿದರು.
ಮುಂದಿನ ವರ್ಷಕ್ಕೆ 2 ಕೋಟಿ ಜನರ ಯೋಗಾಭ್ಯಾಸದ ಸಂಕಲ್ಪ:
ಇತ್ತೀಚೆಗೆ ನಡೆದ ‘ಮಹಾ ಸಂಕಲ್ಪ ದಿವಸ’ದಂದು ಮೈಸೂರಿನಲ್ಲಿ 1,200 ಯೋಗ ಉಪಾಧ್ಯಾಯರು ಹಾಗೂ 1,20,000ಕ್ಕೂ ಹೆಚ್ಚು ಜನ ಸಾಮಾನ್ಯರು ಒಟ್ಟಾಗಿ ಯೋಗಾಭ್ಯಾಸ ಮಾಡಲು ನಿರ್ಧರಿಸಿರುವುದು ಶ್ಲಾಘನೀಯ. ಈ ಯೋಗದ ಪ್ರಚಾರ ಹೀಗೆಯೇ ಮುಂದುವರಿಯಬೇಕು. ಮುಂದಿನ ವರ್ಷ ನಮ್ಮ ಕರ್ನಾಟಕದಲ್ಲಿ ಕನಿಷ್ಠ 2 ಕೋಟಿ ಜನರು ಯೋಗಾಭ್ಯಾಸ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಇಂದಿನಿಂದಲೇ ಪ್ರಯತ್ನವನ್ನು ಪ್ರಾರಂಭಿಸಬೇಕು ಮತ್ತು ತಮ್ಮ ಬಂಧು-ಮಿತ್ರರಿಗೆ ಯೋಗದ ಮಹತ್ವವನ್ನು ತಿಳಿಸಿಕೊಡಬೇಕು ಎಂದು ಸಲಹೆ ನೀಡಿದರು.
ನ್ಯೂಜಿಲ್ಯಾಂಡ್‍ನಿಂದ ಕ್ಯಾಲಿಫೆÇೀರ್ನಿಯಾವರೆಗೆ 24 ಗಂಟೆಗಳ ಲೈವ್ ಯೋಗ;
ದತ್ತ ಕ್ರಿಯಾ ಯೋಗದ ವ್ಯಾಪ್ತಿಯು ಜಾಗತಿಕ ಮಟ್ಟದಲ್ಲಿದ್ದು, ದಿನದ ಮೊದಲ ಸೂರ್ಯನ ಕಿರಣಗಳು ಬೀಳುವ ನ್ಯೂಜಿಲ್ಯಾಂಡ್ ದೇಶದಿಂದ ಹಿಡಿದು ಪಶ್ಚಿಮದ ಅಮೆರಿಕದ ಕ್ಯಾಲಿಫೆÇೀರ್ನಿಯಾವರೆಗಿನ ಆಶ್ರಮದ ಎಲ್ಲಾ ಶಾಖೆಗಳಲ್ಲೂ ಯೋಗಾಭ್ಯಾಸ ನಡೆಯುತ್ತಿದೆ. ಸತತ 24 ಗಂಟೆಗಳ ಕಾಲ ದತ್ತ ಕ್ರಿಯಾ ಯೋಗದ ನೇರಪ್ರಸಾರ (ಲೈವ್) ನಡೆಯುವ ಸಂಕಲ್ಪ ಯಶಸ್ವಿಯಾಗಿ ನೆರವೇರುತ್ತಿದೆ ಎಂದು ಶ್ರೀಗಳು ಹೆಮ್ಮೆಯಿಂದ ತಿಳಿಸಿದರು.
ಆಶ್ರಮದ ವೈದ್ಯರೂ ಹಾಗೂ ಕ್ರಿಯಾ ಯೋಗ ಶಿಕ್ಷಕರೂ ಆದ ಫಣೀಶ್ರೀ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಸಿದ್ಧಪಡಿಸಿದ್ದ ಸಂಗೀತ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು