Skip to main content

3Kaala News

ಸುಭಾಷಿತ 

ಪ್ರಯತ್ನ ಎಂಬುದು ಬೀಜದ ಹಾಗೆ ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ.
ಇವತ್ತು ನಿನ್ನನ್ನು ಏನು ನೋಯಿಸುತ್ತಿದೆಯೋ ನಾಳೆ ಅದೇ ನಿನ್ನನ್ನು ಬಲಗೊಳಿಸುತ್ತದೆ

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿದ್ಯುತ್ ಖಾಸಗೀಕರಣವನ್ನು ಕೈಬಿಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ


ಮೈಸೂರು : ವಿದ್ಯುತ್ ವಲಯವನ್ನು ಖಾಸಗೀಕರಣ ಮಾಡುವುದು ರೈತರ ಮರಣ ಶಾಸನ ಬರೆದಂತೆ. ಹಾಗಾಗಿ ವಿದ್ಯುತ್ ಖಾಸಗೀಕರಣವನ್ನು ಕೈಬಿಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತಸಂಘದ (ರೈತಬಣ) ಅಧ್ಯಕ್ಷ ಇಂಗಲಗುಪ್ಪೆ ಕೃಷ್ಣೇಗೌಡ ಎಚ್ಚರಿಕೆ ನೀಡಿದರು.
ಮಂಗಳವಾರ ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ರೈತರ ಹೆಸರೇಳಿ ಅಧಿಕಾರಕ್ಕೆ ಬಂದವರು ಈಗ ಖಾಸಗಿ ಕಂಪನಿ ಜತೆ ಕೈ ಜೋಡಿಸಿ ರೈತರ ಬೆನ್ನಿಗೆ ಚೂರಿ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಸರ್ಕಾರಿ ಸ್ವಾಮ್ಯದಲ್ಲಿರುವ ವಿದ್ಯುತ್ ಸರಬರಾಜು ಸಂಸ್ಥೆಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ. ಹೀಗಿದ್ದರೂ ಖಾಸಗಿ ಕಂಪನಿಗಳಿಗೆ ಪರವಾನಗಿ ನೀಡುವ ಮೂಲಕ ಸರ್ಕಾರ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಹುನ್ನಾರ ನಡೆಸುತ್ತಿದೆ. ಇದು ಖಂಡನೀಯ ಮತ್ತು ಇದರ ಹಿಂದಿನ ಮರ್ಮ ಏನು? ಎಂದು ಪ್ರಶ್ನಿಸಿದರು.
ವಿದ್ಯುತ್ ಖಾಸಗೀಕರಣದಿಂದ ಕೃಷಿಯ ಮೇಲೆ ದುಷ್ಪರಿಣಾಮ ಬೀರುತ್ತದೆ. ರೈತರು ತಮ್ಮ ಭೂಮಿಯಲ್ಲಿ ವ್ಯವಸಾಯ ಮಾಡಲು ದುಪ್ಪಟ್ಟು ದರ ನೀಡಿ, ವಿದ್ಯುತ್ ಖರೀದಿ ಮಾಡಬೇಕಾಗುತ್ತದೆ. ನಂತರ ಬೆಳೆಗಳಿಗೆ ಬೆಲೆ ಸಿಗದಿದ್ದಲ್ಲಿ, ರೈತರು ಕ್ರಮೇಣ ಕೃಷಿಯಿಂದ ವಿಮುಖರಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೊರೋನಾ ನಂತರ ಐಟಿ, ಬಿಟಿ ಮತ್ತಿತರ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದವರು, ಇದೀಗ ಕೃಷಿಯತ್ತ ಮುಖ ಮಾಡಿದ್ದಾರೆ, ಆದರೆ, ವಿದ್ಯುತ್ ಖಾಸಗೀಕರಣ ಮಾಡಿದರೆ ಮತ್ತೆ ಯುವಕರು ಕೃಷಿಯನ್ನು ಬಿಟ್ಟು ನಗರ, ಪಟ್ಟಣಗಳಿಗೆ ವಲಸೆ ಹೋಗಬೇಕಾಗುತ್ತದೆ. ಕೃಷಿ ಭೂಮಿಗಳು ಉಳ್ಳವರ ಪಾಲಾಗುತ್ತವೆ. ವಿದ್ಯುತ್ ಕ್ಷೇತ್ರದ ಖಾಸಗೀಕರಣದಿಂದ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದ್ದು, ಗೃಹಜ್ಯೋತಿ ಯೋಜನೆ, ಕೃಷಿ ಪಂಪ್‍ಸೆಟ್‍ಗಳಿಗೆ ನೀಡಲಾಗುತ್ತಿರುವ ಉಚಿತ ವಿದ್ಯುತ್ ಹಾಗೂ ವಿವಿಧ ಸಹಾಯಧನ ಯೋಜನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದರು.
ಖಾಸಗಿ ಕಂಪನಿಯವರು ವಿದ್ಯುತ್ ದರದ ಬಗ್ಗೆ ಯಾವುದೇ ನಿರ್ಧಾರ ಕೈಗೊಳ್ಳಬಹುದು. ತಮ್ಮ ಮನ ಬಂದಂತೆ ಹೆಚ್ಚಿಸಬಹುದಾದ ಅಪಾಯವೂ ಇದೆ. ವಿದ್ಯುತ್ ವಲಯದ ಖಾಸಗೀಕರಣದಿಂದ ಗ್ರಾಮೀಣ ಪ್ರದೇಶಗಳನ್ನು ಮತ್ತು ಕೃಷಿಯನ್ನು ನಿರ್ಲಕ್ಷ್ಯ ಮಾಡಲಾಗುತ್ತದೆ. ಇಲಾಖೆಯ ನೇಮಕಾತಿಗಳಲ್ಲಿ ಮೀಸಲಾತಿ ವ್ಯವಸ್ಥೆಗೆ ಹಿನ್ನಡೆಯಾಗುತ್ತದೆ. ಸರ್ಕಾರಿ ಉದ್ಯೋಗಗಳ ಭದ್ರತೆಗೆ ಅಪಾಯ ಉಂಟಾಗಬಹುದು. ವಿದ್ಯುತ್‍ನಂತಹ ಮೂಲಭೂತ ಸೇವೆಯೇ ವ್ಯಾಪಾರದ ಸರಕಾಗುವ ಭೀತಿ ಎದುರಾಗಿದ್ದು, ಸಾರ್ವಜನಿಕರ ತೆರಿಗೆ ಹಣದಿಂದ ನಿರ್ಮಿಸಲಾದ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳು ಖಾಸಗಿ ಕಂಪನಿಗಳ ಪಾಲಾಗುವ ಸಾಧ್ಯತೆ ಇದೆ ಎಂದು ಹೇಳಿದರು.
ರೈತರು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಟಾಟಾ ಪವರ್ ಸಂಸ್ಥೆಗೆ ಪರವಾನಗಿ ನೀಡಬಾರದು. ವಿದ್ಯುತ್ ಖಾಸಗೀಕರಣ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಬೇಕು. ಇಲ್ಲದಿದ್ದಲ್ಲಿ ಸಾವಿರಾರು ರೈತರ ಜತೆಗೂಡಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಿಡದಿ ಟೌನ್‍ಶಿಪ್ ಯೋಜನೆಯನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಅನ್ಯ ಉದ್ದೇಶಗಳಿಗೆ ಬಳಸಬಾರದು. ರಾಜಕೀಯ ಮುಖಂಡರು ತಮ್ಮ ಸ್ವಹಿತಾಸಕ್ತಿಗಾಗಿ ಇಂತಹ ಯೋಜನೆಗಳನ್ನು ರೂಪಿಸುತ್ತಾರೆ. ಇದರಿಂದ ಲಕ್ಷಾಂತರ ರೈತಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕರಾದ ಕೆಆರ್‍ಎಸ್ ರಾಮೇಗೌಡ, ಮೈಸೂರು ಜಿಲ್ಲಾಧ್ಯಕ್ಷರಾದ ಮಾಲೀಕ್ ಆವರ್ತಿ, ಮುಖಂಡರಾದ ಶಿವಣ್ಣ, ಶಿವಕುಮಾರ್, ಅರಸಿನಕೆರೆ ಕೆಂಪರಾಜು ಇದ್ದರು.