Skip to main content

3Kaala News

ಸುಭಾಷಿತ 

ಜೀವನ ಅನ್ನುವ ಜೋಳಿಗೆಯಲ್ಲಿ ಭಗವಂತ ಎಲ್ಲರಿಗೂ ಸಂತೋಷದ ಬುತ್ತಿಯನ್ನು ಇಟ್ಟು ಕಳಿಸುತ್ತಾನೆ. ಆದರೆ ನಾವು ನಮ್ಮ ಜೋಳಿಗೆಯಲ್ಲಿ ಏನಿದೆ ಎಂದು ನೋಡಿ ಆನಂದಪಡುವುದನ್ನು ಬಿಟ್ಟು,ಬೇರೆಯವರ ಜೋಳಿಗೆಯಲ್ಲಿ ಏನಿದೆ ಎಂದು ತಿಳಿದುಕೊಳ್ಳುವ ಕೆಟ್ಟ ಕುತೂಹಲದಿಂದ ಸದಾ ದುಃಖಿಯಾಗಿರುತ್ತೇವೆ.

Current Weather Card
--°C
Mysore, IN
Loading...
☁️

Live Gold Silver Fuel News Ticker
Loading live rates...

ವಿಶ್ವೇಶ್ವರಯ್ಯ ಅವರ ಜೀವನ ಸಾಧನೆ ಯುವಜನರಿಗೆ ಪ್ರೇರಣೆ: ಡಾ. ಈ.ಸಿ. ನಿಂಗರಾಜ್‌ಗೌಡ

ಮೈಸೂರು: ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ ಸಾಧನೆ ಯುವಜನರಿಗೆ ಪ್ರೇರಣೆಯಾಗಿದೆ ಎಂದು ಬಿಜೆಪಿ ಮೈಸೂರು ವಿಭಾಗೀಯ ಸಹ ಪ್ರಭಾರಿ ಡಾ. ಈ.ಸಿ. ನಿಂಗರಾಜ್‌ಗೌಡ ಹೇಳಿದರು.
ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜಯಂತಿಯನ್ನು ಮೈಸೂರಿನ ರೋಟರಿ ಸೌತ್ ಈಸ್ಟ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ “ಇಂಜನೀರ‍್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ, ಶಿಸ್ತು, ದೂರದೃಷ್ಟಿ ಹಾಗೂ ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಅವರು ನೀಡಿದ ಅಮೂಲ್ಯ ಕೊಡುಗೆಗಳ ಕುರಿತು ಸುದೀರ್ಘವಾಗಿ ತಿಳಿಸಿದರು.
ಸರ್ ಎಂ. ವಿಶ್ವೇಶ್ವರಯ್ಯ ಒಬ್ಬ ಶ್ರೇಷ್ಠ ಇಂಜಿನಿಯರ್ ಆಗಿರುವುದರ ಜೊತೆಗೆ, ತಮ್ಮ ತಾಂತ್ರಿಕ ಜ್ಞಾನ, ಆಡಳಿತಾತ್ಮಕ ಸಾಮರ್ಥ್ಯ, ಕಾರ್ಯದಕ್ಷತೆ ಹಾಗೂ ದೂರದೃಷ್ಟಿಯ ಮೂಲಕ ಮೈಸೂರು ಸಂಸ್ಥಾನದ ಆರ್ಥಿಕ, ಕೈಗಾರಿಕಾ ಮತ್ತು ಸಾಮಾಜಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ರಾಷ್ಟçನಿರ್ಮಾತೃರಾಗಿದ್ದಾರೆ ಎಂದು ಹೇಳಿದರು.
ಮೈಸೂರು ಸಂಸ್ಥಾನವನ್ನಾಳಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದ ದಿವಾನರಾಗಿ ಕಾರ್ಯನಿರ್ವಹಿಸಿದ ಅವಧಿ ಮೈಸೂರು ಇತಿಹಾಸದಲ್ಲಿ ಅಭಿವೃದ್ಧಿಯ ಮಹತ್ವದ ಅಧ್ಯಾಯವಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರಗತಿಪರ ಚಿಂತನೆ ಹಾಗೂ ವಿಶ್ವೇಶ್ವರಯ್ಯ ಅವರ ಆಡಳಿತಾತ್ಮಕ ಮತ್ತು ತಾಂತ್ರಿಕ ದೂರದೃಷ್ಟಿ ಒಂದಾಗಿ ಮೈಸೂರು ಸಂಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಬಲ ನೀಡಿತು ಎಂದು ವಿವರಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಿಕ್ಷಣ, ಕೈಗಾರಿಕೆ, ನೀರಾವರಿ, ವಿದ್ಯುತ್, ಆರೋಗ್ಯ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಈ ಆಶಯಗಳಿಗೆ ಕಾರ್ಯರೂಪ ನೀಡುವಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಇಬ್ಬರ ನಡುವಿನ ಪರಸ್ಪರ ಗೌರವ, ವಿಶ್ವಾಸ ಮತ್ತು ಅಭಿವೃದ್ಧಿಯ ದೃಷ್ಟಿಕೋನ ಮೈಸೂರು ಸಂಸ್ಥಾನದ ಪ್ರಗತಿಗೆ ಪೂರಕವಾಗಿತ್ತು ಎಂದು ಹೇಳಿದರು.
ಕೃಷ್ಣರಾಜ ಸಾಗರ ಅಣೆಕಟ್ಟು ಯೋಜನೆ, ನೀರಾವರಿ ಅಭಿವೃದ್ಧಿ, ವಿದ್ಯುತ್ ಉತ್ಪಾದನೆ, ಕೈಗಾರಿಕಾ ಬೆಳವಣಿಗೆ, ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿ ಹಾಗೂ ಆಧುನಿಕ ಆಡಳಿತ ವ್ಯವಸ್ಥೆಗೆ ಒತ್ತು ನೀಡುವ ಮೂಲಕ ಮೈಸೂರು ಸಂಸ್ಥಾನವನ್ನು ಆಧುನಿಕತೆಯತ್ತ ಕೊಂಡೊಯ್ಯುವ ಪ್ರಯತ್ನದಲ್ಲಿ ವಿಶ್ವೇಶ್ವರಯ್ಯ ಅವರ ಕೊಡುಗೆ ಸ್ಮರಣೀಯವಾಗಿದೆ. ಅವರ ಕಾರ್ಯದಕ್ಷತೆ ಮತ್ತು ದೂರದೃಷ್ಟಿಯಿಂದ ಮೈಸೂರು ಸಂಸ್ಥಾನವು ದೇಶದ ಇತರ ಸಂಸ್ಥಾನಗಳಿಗೆ ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿ ಹೊಂದಿತು ಎಂದು ತಿಳಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಅಭಿವೃದ್ಧಿಗೆ ಅಗತ್ಯವಾದ ರಾಜಕೀಯ ನಾಯಕತ್ವ ಮತ್ತು ಬೆಂಬಲವನ್ನು ನೀಡಿದರೆ, ಸರ್ ಎಂ. ವಿಶ್ವೇಶ್ವರಯ್ಯ ಅವರು ತಮ್ಮ ತಾಂತ್ರಿಕ ಜ್ಞಾನ ಮತ್ತು ಆಡಳಿತ ಕೌಶಲ್ಯದ ಮೂಲಕ ಆ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಿದರು. ಇವರಿಬ್ಬರ ಸಮನ್ವಯದ ಫಲವಾಗಿ ಮೈಸೂರು ಸಂಸ್ಥಾನದಲ್ಲಿ ಕೈಗಾರಿಕಾ, ಶೈಕ್ಷಣಿಕ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸಿದವು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸೌತ್ ಈಸ್ಟ್ ಕ್ಲಬ್ ಅಧ್ಯಕ್ಷ ವೆಂಕಟೇಶ್ ವಹಿಸಿದ್ದರು. ಕಾರ್ಯದರ್ಶಿ ರಾಜ್ ಭಟ್, ಅಸಿಸ್ಟೆಂಟ್ ಗವರ್ನರ್ ಎಂ. ಮೋಹನ್, ಮಾಜಿ ಕಾರ್ಯದರ್ಶಿ ಸುರೇಶ್ ಹಾಗೂ ಮುಖ್ಯ ಅತಿಥಿಯಾಗಿ ಪುಲಕೇಶಿ ಬಿ. ವಾರಿ,
ವಾಸುದೇವನ್ ಅವರು ಸರ್ ಎಂ. ವಿಶ್ವೇಶ್ವರಯ್ಯ ಅವರ ಜೀವನ, ಸಾಧನೆ ಹಾಗೂ ಮೈಸೂರು ಸಂಸ್ಥಾನದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಂ. ರಾಜೀವ್, ವೈ.ವಿ. ಮುರಳೀಧರ್, ರಮೇಶ್ ರಾವ್, ಎನ್.ಟಿ. ಗಿರೀಶ್, ಮಹದೇವಸ್ವಾಮಿ, ನವೀನ್, ಇಂಜಿನಿಯರ್‌ಗಳಾದ ಗೋಪಾಲ್, ರಮೇಶಬಾಬು, ನಂದೀಶ್, ಸಿ. ರಾಘವೇಂದ್ರ, ಮಂಜುನಾಥ್, ಧೃವ, ನಾಗರಾಜು, ಮುರಳಿ, ಮಧು ಸೇರಿದಂತೆ ರೋಟರಿ ಸೌತ್ ಈಸ್ಟ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.