
ಮೈಸೂರು: ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ಸಾಂಸ್ಕöÈತಿಕ ನಗರಿ ಸಜ್ಜಾಗುತ್ತಿದ್ದು, ಹಬ್ಬದ ಯಶಸ್ವಿ ಆಯೋಜನೆ ಹಾಗೂ ಪ್ರವಾಸಿಗರ ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯ ಕಾಮಗಾರಿಗಳ ಜಂಟಿ ಸ್ಥಳ ಪರಿಶೀಲನೆಯನ್ನು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಬುಧವಾರ ನಡೆಸಿದರು.
ನಗರದ ಮಹಾರಾಜ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವ ‘ಆಹಾರ ಮೇಳ’ ಆವರಣಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ , ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದAತೆ ಶುದ್ಧ ಕುಡಿಯುವ ನೀರು ಹಾಗೂ ತೀವ್ರ ಬಿಸಿಲಿನಿಂದ ರಕ್ಷಣೆ ಪಡೆಯಲು ಸೂಕ್ತ ನೆರಳಿನ ವ್ಯವಸ್ಥೆ ಕಲ್ಪಿಸುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಆಹಾರ ಮೇಳದಲ್ಲಿ ಉತ್ಪತ್ತಿಯಾಗುವ ಹಸಿ ಮತ್ತು ಒಣ ಕಸವನ್ನು ಸ್ಥಳದಲ್ಲೇ ಬೇರ್ಪಡಿಸಿ, ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ದಸರಾ ವೀಕ್ಷಣೆಗೆ ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ, ನಗರದ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳನ್ನು ಖುದ್ದು ಪರಿಶೀಲಿಸಿದರು.
ಕೆ.ಆರ್.ಎಸ್. ರಸ್ತೆಯ ರಾಯಲ್ ಇನ್ ಜಂಕ್ಷನ್, ಬೆಂಗಳೂರು ಮಾರ್ಗದ ಕೆಂಪೇಗೌಡ ಜಂಕ್ಷನ್, ಪುಷ್ಪಾಶ್ರಮ ರಸ್ತೆ ಹಾಗೂ ದೇವಾಲಪುರ ಸರ್ಕಲ್ನ ಹೊಸಹುಂಡಿ ಬಳಿಯ ರಸ್ತೆ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಿ, ಸಂಚಾರಕ್ಕೆ ಮುಕ್ತಗೊಳಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದರು.
ಬಳಿಕ ಉತ್ತನಹಳ್ಳಿಯಲ್ಲಿ ಆಯೋಜಿಸಲಾಗುತ್ತಿರುವ ‘ಯುವ ದಸರಾ’ ಮೈದಾನಕ್ಕೆ ಭೇಟಿ ನೀಡಿ, ಬೃಹತ್ ವೇದಿಕೆ ನಿರ್ಮಾಣ ಹಾಗೂ ಸಿದ್ಧತೆಗಳನ್ನು ವೀಕ್ಷಿಸಿ, ಯುವಜನತೆಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕುಡಿಯುವ ನೀರು, ಬೆಳಕು, ಶೌಚಾಲಯ ಹಾಗೂ ಭದ್ರತಾ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಸೂಚನೆ ನೀಡಿದರು.
ಇದರೊಂದಿಗೆ ಚಾಮುಂಡಿ ಬೆಟ್ಟ ಹಾಗೂ ಕರ್ನಾಟಕ ವಸ್ತುಪ್ರದರ್ಶನ ಆವರಣಕ್ಕೂ ಭೇಟಿ ನೀಡಿದ ಸಚಿವರು, ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿದರು. ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರು, ನೆರಳು ಮತ್ತು ಸುಗಮ ವಾಹನ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಹಾಗೂ ವಸ್ತುಪ್ರದರ್ಶನವನ್ನು ನಿಗದಿತ ಸಮಯಕ್ಕೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲು ಕಾಮಗಾರಿಗಳಿಗೆ ವೇಗ ನೀಡುವಂತೆ ನಿರ್ದೇಶಿಸಿದರು.
ಅಂತಿಮವಾಗಿ ಮೈಸೂರು ಅರಮನೆ ಅಂಗಳದಲ್ಲಿ ನಡೆಯುತ್ತಿರುವ ತಾತ್ಕಾಲಿಕ ಮುಖ್ಯ ವೇದಿಕೆ ನಿರ್ಮಾಣ, ವರ್ಣರಂಜಿತ ದೀಪಾಲಂಕಾರ, ಆಸನ ಹಾಗೂ ಶೌಚಾಲಯ ವ್ಯವಸ್ಥೆ ಸೇರಿದಂತೆ ವಿವಿಧ ಪೂರ್ವಸಿದ್ಧತೆಗಳನ್ನು ವೀಕ್ಷಿಸಿದರು.
ನಾಡಹಬ್ಬವನ್ನು ವೀಕ್ಷಿಸಲು ಆಗಮಿಸುವ ಪ್ರವಾಸಿಗರಿಗೆ ಅತ್ಯಂತ ಸುರಕ್ಷಿತ ಹಾಗೂ ವ್ಯವಸ್ಥಿತ ಅನುಭವ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸ್ಥಳ ಪರಿಶೀಲನಾ ಸಂದರ್ಭದಲ್ಲಿ ಶಾಸಕರಾದ ದರ್ಶನ್ ಧ್ರುವನಾರಾಯಣ್, ಹರೀಶ್ ಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ. ತಿಮ್ಮಯ್ಯ, ಶಿವಕುಮಾರ್, ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ, ಜಿಲ್ಲಾಧಿಕಾರಿ ಲಕ್ಷಿö್ಮಕಾಂತ ರೆಡ್ಡಿ ಸೇರಿದಂತೆ ಹಲವು ಹಿರಿಯ ನಾಯಕರು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.