
ಎಚ್.ಡಿ.ಕೋಟೆ : ಅತಿವೇಗವಾಗಿ ಚಲಿಸುತ್ತಿದ್ದ ಸಾರಿಗೆ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಬೈಕ್ಗೆ ಡಿಕ್ಕಿ ಹೊಡೆದು ನಂತರ ರಸ್ತೆ ಬದಿ ನಿಂತಿದ್ದ ಪಾದಚಾರಿಗಳಿಗೂ ಗುದ್ದಿದ ಪರಿಣಾಮ ಬೈಕ್ ಸವಾರ ಸೇರಿದಂತೆ ಮೂವರು ಮೃತಪಟ್ಟು ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಮೈಸೂರು ಮಾನಂದವಾಡಿ ರಸ್ತೆಯ ಪುರ ಬಳಿ ಸಂಭವಿಸಿದೆ.
ಮೃತರನ್ನು ಎಚ್.ಡಿ. ಕೋಟೆ ಪಟ್ಟಣದ ಮುಸ್ಲಿಂ ಬ್ಲಾಕ್ ನಿವಾಸಿ ಮಾವಿಯ ಮಾವಿಯ ಷರೀಪ್ ಮತ್ತು ವಿಜಾಪುರ ಭಾಗದ ಸಚಿನ್, ಗೋವಿಂದ ರಾಥೋಡ್ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಅಮಿತ್ ನನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಜೆಸಿಬಿ ಕೆಲಸಕ್ಕೆ ಮೃತರಾದ ಸಚಿನ್, ಗೋವಿಂದ ಮತ್ತು ಗಾಯಗೊಂಡ ಅಮಿತ್ ವಿಜಾಪುರ ಜಿಲ್ಲೆಯಿಂದ ಆಗಮಿಸಿದ್ದರು ಎನ್ನಲಾಗಿದೆ.
ಸಾರಿಗೆ ಬಸ್ ವೇಗವಾಗಿ ಎಚ್.ಡಿ.ಕೋಟೆಯಿಂದ ಬರುತ್ತಿತ್ತು ಎನ್ನಲಾಗಿದ್ದು, ಮೈಸೂರಿನಿಂದ ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಬದಿ ಮಾತನಾಡುತ್ತಿದ್ದ ಮೂರು ಮಂದಿಯ ಮೇಲೆ ಎರಗಿದೆ. ಸ್ಥಳದಲ್ಲೇ ಬೈಕ್ ಸವಾರ ಸಾವನ್ನಪ್ಪಿದ್ದು ಮತ್ತೊರ್ವ ನನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ, ಮತ್ತೋರ್ವ ತೀವ್ರ ನಿಗಾ ಘಟಕದಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆಗೆ ಸಾರಿಗೆ ಬಸ್ ಚಾಲಕನ ಅಜಾಗರೂಕತೆ ಮತ್ತು ಅತಿವೇಗವೇ ಕಾರಣ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಸಾರಿಗೆ ಬಸ್ ಮುಂಭಾಗ ನಜ್ಜುಗುಜ್ಜಾಗಿದ್ದು, ಬೈಕ್ ಸವಾರರು ಸಾರಿಗೆ ಬಸ್ ಚಕ್ರದೊಳಗೆ ಸಿಲುಕಿ ರಕ್ತದಲ್ಲಿ ಒದ್ದಾಡುತ್ತಿದ್ದ ದೃಶ್ಯ ನೋಡುಗರ ಮನ ಕಲಕುವಂತಿತ್ತು. ಘಟನೆಯಿಂದ ಕೆಲವೊತ್ತು ಮೈಸೂರು – ಮಾನಂದವಾಡಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಂಡಿತ್ತು.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಎಚ್.ಡಿ.ಕೋಟೆ ಪೊಲೀಸರು ಮೃತದೇಹಗಳನ್ನು ಎಚ್.ಡಿ.ಕೋಟೆ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಸ್ಥಳಾಂತರಿಸಿ ಗಾಯಾಳ ಚಿಕಿತ್ಸೆಗೆ ನೆರವಾದರು. ಮರಣೋತರ ಪರೀಕ್ಷೆ ನಂತರ ವಾರಸುದಾರರಿಗೆ ಮೃತದೇಹ ಹಸ್ತಾಂತರಿಸಲಾಯಿತು. ವಿಷಯ ತಿಳಿದು ಶಾಸಕ ಅನಿಲ್ ಚಿಕ್ಕಮಾದು ಶವಾಗಾರಕ್ಕೆ ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದರು.
ಪ್ರಕರಣ ದಾಖಲಿಸಿಕೊಂಡಿರುವ ಎಚ್.ಡಿ. ಕೋಟೆ ಪಟ್ಟಣದ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.